ಕೇರಳದಲ್ಲಿ ಹೆಚ್ಚಿದ ಜಿಕಾ ವೈರಸ್ ಪ್ರಕರಣ: ಮಾರ್ಗಸೂಚಿ ಬಿಡುಗಡೆ ಮಾಡಿದ ಕರ್ನಾಟಕ

ಹೈಲೈಟ್ಸ್‌:

  • ಕೇರಳದಲ್ಲಿ 14 ಜಿಕಾ ವೈರಸ್ ಪ್ರಕರಣಗಳು ಪತ್ತೆ, ತೀವ್ರ ಕಟ್ಟೆಚ್ಚರ
  • ರಾಜ್ಯದಲ್ಲಿ ವೈರಸ್ ಹರಡದಂತೆ ತಡೆಯಲು ಮಾರ್ಗಸೂಚಿ ಬಿಡುಗಡೆ
  • ನಗರ ಮತ್ತು ಗ್ರಾಮೀಣ ಮಟ್ಟದಲ್ಲಿ ಸಮರೋಪಾದಿ ನಿಗಾಕ್ಕೆ ಸೂಚನೆ
  • ಜನ ವಸತಿ, ಏರ್‌ಪೋರ್ಟ್ ಮುಂತಾದೆಡೆ ಸ್ವಚ್ಚತೆಗೆ ಸೂಚನೆ

ಬೆಂಗಳೂರು: ನೆರೆಯ ಕೇರಳದಲ್ಲಿ ಕೋವಿಡ್ 19 ಸೋಂಕಿನ ನಡುವೆ ಸುಮಾರು 15 ಜಿಕಾ ವೈರಸ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ, ಕರ್ನಾಟಕದಲ್ಲಿ ತೀವ್ರ ಕಟ್ಟೆಚ್ಚರ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಕರ್ನಾಟಕ ಸರಕಾರ ಶುಕ್ರವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇರಳದಲ್ಲಿ 15 ಜಿಕಾ ವೈರಸ್ ಪ್ರಕರಣಗಳು ಖಚಿತವಾದ ಹಿನ್ನೆಲೆಯಲ್ಲಿ ಅಲ್ಲಿನ ಸನ್ನಿವೇಶದ ಬಗ್ಗೆ ಗಮನ ಹರಿಸಲು ಆರು ಸದಸ್ಯರ ಕೇಂದ್ರ ತಂಡವನ್ನು ರವಾನಿಸಲಾಗಿದೆ. ಈಗಾಗಲೇ ಗಮನಾರ್ಹ ಸಂಖ್ಯೆಯಲ್ಲಿ ಜಿಕಾ ವೈರಸ್ ಪ್ರಕರಣಗಳು ದಾಖಲಾಗಿರುವುದರಿಂದ ಕೇರಳ ತೀವ್ರ ಎಚ್ಚರಿಕೆ ಕ್ರಮಗಳನ್ನು ತೆಗೆದಿಕೊಳ್ಳುತ್ತಿದೆ.

ಜಿಕಾ ವೈರಸ್ ರಾಜ್ಯದಲ್ಲಿಯೂ ಹರಡುವ ಸಾಧ್ಯತೆ ಇರುವುದರಿಂದ ಗ್ರಾಮೀಣ ಭಾಗಗಳಲ್ಲಿನ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರು ಹಾಗೂ ನಗರ ಪ್ರದೇಶ ವಾರ್ಡ್‌ಗಳಲ್ಲಿನ ಪಾಕ್ಷಿಕ ಪರಿವೀಕ್ಷಣೆಯಂತಹ ಚಟುವಟಿಕೆಗಳನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಲಾಗಿದೆ.

ಜಿಕಾ ವೈರಸ್ ಮಾರ್ಗಸೂಚಿ
ರಾಜ್ಯದುದ್ದಕ್ಕೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಯುದ್ಧೋಪಾದಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಮಾನವ ವಸತಿ ಪ್ರದೇಶದ ಸುತ್ತಮುತ್ತಲಿನ ಸ್ಥಳಗಳಲ್ಲಿ ಈಡಿಸ್ ಸೊಳ್ಳೆ ಸೃಷ್ಟಿಯಾಗದಂತೆ ತಡೆಯಲು ಘನ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ವಸತಿ, ಸಮುದಾಯ ಮತ್ತು ಸಾಂಸ್ಥಿಕ ಮಟ್ಟದಲ್ಲಿ ಜೈವಿಕ ಮತ್ತು ರಾಸಾಯನಿಕ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವ ಸ್ವಚ್ಚತೆ ನಿರ್ವಹಣೆಯನ್ನು ನಡೆಸಬೇಕು. ವಿಮಾನ ನಿಲ್ದಾಣಗಳು, ಸಮುದ್ರ ಬಂದರು, ಗ್ರಾಮೀಣ ಮತ್ತು ನಗರ ವಾರ್ಡ್ ಮಟ್ಟಗಳಲ್ಲಿ ಈಡಿಸ್ ಲಾರ್ವ ವೀಕ್ಷಣೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಯಾಣ ಇತಿಹಾಸ ಅಥವಾ ಅತಿಥಿಗಳ ಭೇಟಿಗಳನ್ನು ಕೂಡ ರೋಗ ಹರಡುವ ಶಂಕೆಯನ್ನಾಗಿ ಪರಿಗಣಿಸಬೇಕು. ಅನುಮಾನಾಸ್ಪದ ಪ್ರಕರಣಗಳ ಮಾದರಿಗಳನ್ನು ಸಂಗ್ರಹಿಸಿ ಅವುಗಳನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ರವಾನಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಗರ್ಭಿಣಿಯರ ಅಲ್ಟ್ರಾ-ಸೌಂಡಿಂಗ್ ಪರೀಕ್ಷೆ ವೇಳೆ ಮೈಕ್ರೋಸೆಫಲಿ (ಚಿಕ್ಕ ತಲೆ) ಮೇಲೆ ಗಮನ ಇರಬೇಕು. ಅದು ಪತ್ತೆಯಾದರೆ ಗರ್ಭಿಣಿಯ ಸೀರಮ್ (ರಕ್ತಸಾರ) ಮಾದರಿಯನ್ನು ಎನ್‌ಐವಿಗೆ ರವಾನಿಸಬೇಕು. ಕೇರಳದ ಗಡಿ ಜಿಲ್ಲೆಗಳಾದ ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *