ಕುಮಾರಸ್ವಾಮಿ ವಿಷಯದಲ್ಲಿ ನಾನು ಯಾವುದೇ ತಪ್ಪು ಮಾತಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಲಿ: ರಾಕ್​ಲೈನ್ ವೆಂಕಟೇಶ್

ಬೆಂಗಳೂರು: ರಾಕ್​ಲೈನ್​ ವೆಂಕಟೇಶ್ ನಿವಾಸಕ್ಕೆ ಇಂದು ಬೆಳ್ಳಂಬೆಳಗ್ಗೆಯೇ ಮುತ್ತಿಗೆ ಹಾಕಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಂಬಲಿಗರು ರಾಕ್​ಲೈನ್ ವೆಂಕಟೇಶ್ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರೊಂದಿಗೆ ಸಂಸದೆ ಸುಮಲತಾ ಹಾಗೂ ಹೆಚ್.ಡಿ.ಕುಮಾರಸ್ವಾಮಿ ನಡುವಿನ ಕೆಆರ್​ಎಸ್ ಡ್ಯಾಂ ಬಿರುಕು ವಿಚಾರ ಮತ್ತು ಅಕ್ರಮ ಗಣಿಗಾರಿಕೆ ವಿಷಯವಾಗಿ ಜಟಾಪಟಿ ತಾರಕಕ್ಕೇರಿದ್ದು ಅಭಿಮಾನಿಗಳ ನಡುವೆಯೂ ಜಗಳ ಆರಂಭವಾಗಿದೆ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅಂಬರೀಷ್​ ಕುಟುಂಬದ ಆತ್ಯಾಪ್ತ, ಚಿತ್ರ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ವಿರುದ್ಧ ಹೆಚ್​ಡಿಕೆ ಅಭಿಮಾನಿಗಳು, ಜೆಡಿಎಸ್​ ಕಾರ್ಯಕರ್ತರು ಕೆಂಡಾಮಂಡಲವಾಗಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಬೆಂಗಳೂರಲ್ಲಿ ಮಾತನಾಡಿರುವ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು ನಾನು ಯಾರ ಮನಸ್ಸಿಗೂ ನೋವಾಗುವಂತೆ ಮಾತಾಡಿಲ್ಲ. ಕುಮಾರಸ್ವಾಮಿ ವಿಷಯದಲ್ಲಿ ನಾನು ಯಾವುದೇ ತಪ್ಪು ಮಾತಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಲಿ ಎಂದು ಹೇಳಿದ್ದಾರೆ.

ಚಿತ್ರರಂಗದ ಬಗ್ಗೆ ಹೆಚ್​ಡಿಕೆ ಮಾತಾಡಿದ್ದಕ್ಕೆ ನಾನೂ ಮಾತಾಡಿದೆ. ಬಹಳ ಕಷ್ಟಪಟ್ಟು ರಾತ್ರಿ ನಿದ್ದೆ ಇಲ್ಲದೆ ಬಂದು ಪ್ರತಿಭಟಿಸಿದರು. ಪ್ರತಿಭಟನೆ ಮಾಡಿಸಿದವರು AC ರೂಮ್​ನಲ್ಲಿ ಮಲಗಿದ್ದರು ಎಂದು ತಮ್ಮ ಮನೆಗೆ ಇಂದು ಬೆಳಗ್ಗೆ ಕುಮಾರಸ್ವಾಮಿ ಅಭಿಮಾನಿಗಳು ಲಗ್ಗೆಯಿಟ್ಟು ದಾಂಧಲೆ ಎಬ್ಬಿಸಿರುವ ಬಗ್ಗೆ ಬೆಂಗಳೂರಲ್ಲಿ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ.

ದೇವೇಗೌಡರ ಕುಟುಂಬವನ್ನು ಒಡೆಯಲು ನಾವ್ಯಾರು?:
ದೇವೇಗೌಡರ ಕುಟುಂಬವನ್ನು ಒಡೆಯಲು ನಾವ್ಯಾರು. ದೇವೇಗೌಡರ ಕುಟುಂಬದ ನಾಲ್ಕು ಮಕ್ಕಳೂ ಚೆನ್ನಾಗಿ ಗೊತ್ತು. ದೇವೇಗೌಡರ ಕುಟುಂಬದ ನಾಲ್ವರು ಸೊಸೆಯರೂ ಗೊತ್ತು.ನಾನು ತಪ್ಪು ಮಾತಾಡಿದ್ದರೆ ಮಾತ್ರ ಕ್ಷಮೆ ಕೋರುತ್ತೇನೆ. ನಾನು ಯಾವುದೇ ತಪ್ಪು ಮಾತಾಡಿಲ್ಲ ನಾನ್ಯಾಕೆ ಕ್ಷಮೆ ಕೇಳಲಿ? ಯಾವ ವಿಚಾರವಾಗಿ ನಾನು ಅವರ ಬಳಿ ಕ್ಷಮೆ ಕೇಳಲಿ ಎಂದು ರಾಕ್​ಲೈನ್ ವೆಂಕಟೇಶ್​ ಗುಡುಗಿದ್ದಾರೆ.

ಸಂಸದೆ ಸುಮಲತಾ ಅವರದು ಹಿತ್ತಾಳೆ ಕಿವಿ ಅಲ್ಲ:
ಸಂಸದೆ ಸುಮಲತಾ ಮುಗ್ಧರು ಎಂದುಕೊಂಡಿದ್ದರೆ ಅದು ತಪ್ಪು. ಅವರು ಹೈಲಿ ಎಜುಕೇಟೆಡ್​, ಯೂನಿವರ್ಸಿಟಿಯಲ್ಲಿ ಕಲಿತಿದ್ದಾರೆ. ಅಂಬರೀಶ್ ಜತೆ 27 ವರ್ಷ ಸಂಸಾರ ನಡೆಸಿ ಎಲ್ಲ ಕಲಿತಿದ್ದಾರೆ. ಸುಮಲತಾ ಅವರಿಗೆ ಹೇಳಲು, ಐಡಿಯಾ ಕೊಡಲು ನಾನ್ಯಾರು? ಸಂಸದೆ ಸುಮಲತಾ ಅವರದು ಹಿತ್ತಾಳೆ ಕಿವಿ ಅಲ್ಲ. ಯಾರೋ ಹೇಳಿದ್ದನ್ನು ಕೇಳಿಕೊಂಡು ಅವರು ಮಾತನಾಡಲ್ಲ ಎಂದು ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹೇಳಿದ್ದಾರೆ.

ಅಂಬರೀಶ್ 20 ವರ್ಷಗಳಿಂದಲೂ ನನಗೆ ಆಪ್ತರಾಗಿದ್ದರು. ಅಂಬಿ ನನ್ನ ಮೇಲಿರಿಸಿದ್ದ ಪ್ರೀತಿ, ವಿಶ್ವಾಸ, ಅಭಿಮಾನದಿಂದಾಗಿ ಮಂಡ್ಯ ಚುನಾವಣೆ ಪ್ರಚಾರಕ್ಕೆ ಹೋಗಿದ್ದೆ. ಇಲ್ಲವಾದಲ್ಲಿ ನಾನು ಎಂದೂ ಮಂಡ್ಯ ಜಿಲ್ಲೆಯ ರಾಜಕಾರಣಕ್ಕೆ ತಲೆ ಹಾಕಿಲ್ಲ. ಸುಮಲತಾ ಅವರು ಹೊರಗೆ ಧೈರ್ಯವಾಗಿ ಮಾತಾಡುತ್ತಾರೆ. ಮನೆ ಒಳಗೆ ಬಂದು ಹತ್ತಾರು ಬಾರಿ ಕಣ್ಣೀರು ಹಾಕಿದ್ದರು. ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ಕೊಂಡೊಯ್ದ ವಿಚಾರದಲ್ಲಿ ಕುಮಾರಸ್ವಾಮಿ ಅವರು ಅನಗತ್ಯವಾಗಿ ಹೇಳಿಕೆ ಕೊಡುತ್ತಿದ್ದ ಹಿನ್ನೆಲೆ ನಿನ್ನೆ ಮಾತಾಡಿದ್ದೆ. ಅದು ಬಿಟ್ಟು ಯಾವುದೇ ರಾಜಕೀಯ ಮಾತಾಡಿಲ್ಲ. ರಾಜಕೀಯ ಮಾತಾಡಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದು ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹೇಳಿದ್ದಾರೆ.

ಸಿಎಂ ಯಾರಾಗಿದ್ದರೂ ಅಂಬಿ ಸ್ಮಾರಕಕ್ಕೆ ಸ್ಥಳ ಕೊಡುತ್ತಿದ್ದರು. ಆಗ ಕುಮಾರಸ್ವಾಮಿ ಸಿಎಂ ಆಗಿದ್ದರು ಹಾಗಾಗಿ ಕೊಟ್ಟಿದ್ದಾರೆ. ಕುಮಾರಸ್ವಾಮಿ ಚಿತ್ರರಂಗದ ಬಗ್ಗೆ ಮಾತಾಡಿದ್ದಕ್ಕೆ  ನಾನು ಚಿತ್ರರಂಗದ ಪರವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಅದು ಬಿಟ್ಟು ನಾನು ಯಾವುದೇ ರಾಜಕೀಯ ಮಾತಾಡಿಲ್ಲ ಎಂದು ಬೆಂಗಳೂರಲ್ಲಿ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *