ಪಕ್ಕದಲ್ಲಿ ಬಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಥಳಿಸಿದ ಡಿ.ಕೆ.ಶಿವಕುಮಾರ್
ಮಂಡ್ಯ: ಪಕ್ಕದಲ್ಲಿ ಬಂದು ನಿಂತ ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಥಳಿಸಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಡಿ.ಕೆ.ಶಿವಕುಮಾರ್ ಕೆ.ಎಂ.ದೊಡ್ಡಿಗೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಹಿಂಭಾಗ ಬರುತ್ತಿದ್ದ. ಅಲ್ಲದೇ ಹಿಂಭಾಗದಿಂದ ಬಂದು ಶಿವಕುಮಾರ್ ಹೆಗಲ ಮೇಲೆ ಕೈ ಹಾಕಿದ ಆರೋಪ ಕೇಳಿಬಂದಿದ್ದು, ಕಾರ್ಯಕರ್ತನ ತಲೆ ಮೇಲೆ ಪಟಾರ್ ಅಂತ ಡಿಕೆಶಿ ಬಾರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಕೊಟ್ಟ ಏಟಿಗೆ ಕಾರ್ಯಕರ್ತರು ತಬ್ಬಿಬ್ಬಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಈ ವರ್ತನೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಧಾನ ತಂದಿದೆ. ಈ ಹಿಂದೆ ಸೆಲ್ಫಿಗೆ ಬರುವ ಕಾರ್ಯಕರ್ತರಿಗೂ ಡಿ.ಕೆ.ಶಿವಕುಮಾರ್ ಬಾರಿಸಿದ್ದರು. ಮೊಬೈಲ್ನಲ್ಲಿ ವಿಡಿಯೋ ಮಾಡ್ತಿರುವುದನ್ನು ನೋಡಿ ಹೆಗಲ ಮೇಲೆ ಕೈ ಹಾಕ್ತಿಯಾ, ಕಾಮನ್ಸೆನ್ಸ್ ಇಲ್ವಾ ಅಂತ ಡಿಕೆಶಿ ಗದರಿದರು.
ಒದ್ದು ಹೊರಗೆ ಹಾಕುವೆ ಎಂದಿದ್ದ ಡಿಕೆಶಿ
ಜೂನ್ 12 ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ ಆಗಿದ್ದರು. ನಾನು ಮಾತಾಡುವಾಗ ಮಧ್ಯ ಮಾತಾಡಿದರೆ ಒದ್ದು ಹೊರಗೆ ಹಾಕುವೆ. ನಾನು ಕತ್ತೆ ಕಾಯೋಕೆ ಇಲ್ಲಿಗೆ ಬಂದಿಲ್ಲವೆಂದು ಡಿಕೆಶಿ ಆಕ್ರೋಶ ಹೊರಹಾಕಿ, ಕಾರ್ಯಕರ್ತರಿಗೆ ಶಿಸ್ತು ಕಲಿಸಿ ಎಂದು ಜಿಲ್ಲಾಧ್ಯಕ್ಷ ತಾಜ್ ಪೀರ್ಗೆ ಸೂಚನೆ ನೀಡಿದ್ದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮಾತನಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಮಧ್ಯದಲ್ಲಿ ಮಾತನಾಡಿದ್ದರು. ಇದಕ್ಕೆ ಸಿಟ್ಟಾದ ಡಿಕೆಶಿ ಕಾರ್ಯಕರ್ತರ ವಿರುದ್ಧ ಗರಂ ಆಗಿದ್ದರು.