ಸಿ.ಪಿ. ಯೋಗೇಶ್ವರ್ ಒಬ್ಬ 420; ಆತನ ಸುದ್ದಿ ನನಗೇಕೆ?: ಸಂಸದ ಡಿ.ಕೆ. ಸುರೇಶ್
ರಾಮನಗರ: ಸಚಿವ ಸಿ. ಪಿ. ಯೋಗೇಶ್ವರ್ ಒಬ್ಬ ಫೋರ್ ಟ್ವೆಂಟಿ (420), ಅವರು ಮಾಡಿರುವ 420 ಕೆಲಸಗಳ ಬಗ್ಗೆ ಜನರೇ ಮಾತನಾಡುತ್ತಾರೆ. ಹಾಗಾಗಿ ಅಂತಹವರ ಸುದ್ದಿ ನಾನೇಕೆ ಮಾತನಾಡಲಿ, ನನಗೇಕೆ ಬೇಕು ಅವರ ಸುದ್ದಿ ಎಂದು ಸಂಸದ ಡಿ. ಕೆ. ಸುರೇಶ್ ವ್ಯಂಗ್ಯ ಮಾಡಿದ್ದರೆ. ಬಿಡದಿಯಲ್ಲಿ ಮಾತನಾಡಿದ ಸಂಸದ ಡಿ. ಕೆ. ಸುರೇಶ್ ಸಚಿವ ಸಿ. ಪಿ.ಯೋಗೇಶ್ವರ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಎರಡು ದಿನಗಳ ಹಿಂದೆ ಯೋಗೇಶ್ವರ್ ಮಾತನಾಡಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಅರ್ಜಿ ಹಾಕಿಕೊಳ್ಳಬಹುದೆಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಬಿಡದಿಯಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿ ನಾವು ಸಹ ಜೈಲಿಗೆ ಹೋಗಿ ಬಂದವರನ್ನ ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಲೇವಡಿ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದ ಡಿ.ಕೆ. ಸುರೇಶ್ ಮಾತನಾಡಿ ತೀಕ್ಷ್ಣವಾಗಿಯೇ ಯೋಗೇಶ್ವರ್ ಅವರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಯೋಗೇಶ್ವರ್ 420 ಎನ್ನುವ ಮೂಲಕ ಹರಿಹಾಯ್ದಿದ್ದಾರೆ.
ಡಿ.ಕೆ. ಬ್ರದರ್ಸ್ – ಯೋಗೇಶ್ವರ್ ಪೊಲಿಟಿಕಲ್ ಫೈಟ್ ಶುರು:
ರಾಮನಗರ ಜಿಲ್ಲೆಯಲ್ಲಿ ಮೊದಲಿನಿಂದಲೂ ಸಹ ಡಿ.ಕೆ. ಬ್ರದರ್ಸ್ ಹಾಗೂ ಸಚಿವ ಸಿ.ಪಿ. ಯೋಗೇಶ್ವರ್ ನಡುವೆ ರಾಜಕೀಯ ಯುದ್ಧ ನಡೆಯುತ್ತಲೇ ಇದೇ. ಸ್ವತಃ ಯೋಗೇಶ್ವರ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ದಿನದಿಂದಲೂ ಸಹ ಡಿ.ಕೆ. ಶಿವಕುಮಾರ್ ವಿರುದ್ಧವೇ ರಾಜಕಾರಣ ಮಾಡುತ್ತಾ ಬಂದವರು. ಇನ್ನು ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷ ಸೇರಿದ ಬಳಿಕ ಬಹಿರಂಗವಾಗಿಯೇ ಡಿ.ಕೆ. ಸಹೋದರರ ವಿರುದ್ಧ ಯೋಗೇಶ್ವರ್ ಹರಿಹಾಯುತ್ತಿದ್ದಾರೆ.
ಪಕ್ಷ ಸಂಘಟನೆ ವಿಚಾರವಾಗಿ ಇಬ್ಬರಿಗೂ ರಾಜಕೀಯ ಯುದ್ಧ:
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ವಿಚಾರಕ್ಕೆ ಬಂದರೆ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಎತ್ತಿದಕೈ. ಅದರಲ್ಲಿಯೂ ರಾಮನಗರ ಜಿಲ್ಲೆಯ ವಿಚಾರವಾಗಿ ನೋಡಿದರೆ ಕಾಂಗ್ರೆಸ್ ಸಂಘಟನೆ ಅಚ್ಚುಕಟ್ಟಾಗಿದೆ. ಆದರೆ ಸಚಿವ ಸಿ.ಪಿ. ಯೋಗೇಶ್ವರ್ ಈ ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆ ಮಾಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಹ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗ್ತಿರುವ ಯೋಗೇಶ್ವರ್ ಬಿಜೆಪಿ ಪಕ್ಷಕ್ಕೆ ಬಲತುಂಬುವುದರಲ್ಲಿ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ಆದರೆ ಯೋಗೇಶ್ವರ್ ಮಾತ್ರ ಈ ವಿಚಾರವಾಗಿ ಡಿ.ಕೆ. ಬ್ರದರ್ಸ್ ವಿರುದ್ಧ ನೇರ ಆರೋಪ ಮಾಡ್ತಾರೆ. ಸಿಎಂ ಯಡಿಯೂರಪ್ಪ ಜೊತೆಗೆ ಡಿ.ಕೆ. ಶಿವಕುಮಾರ್ ಒಳ್ಳೆಯ ಸಂಪರ್ಕ ಹೊಂದಿದ್ದಾರೆ. ಹಾಗಾಗಿ ನನಗೆ ಪಕ್ಷ ಸಂಘಟನೆ ಮಾಡಲು ಆಗ್ತಿಲ್ಲ ಎನ್ನುತ್ತಾರೆ. ಆದರೆ ಯೋಗೇಶ್ವರ್ ಮಾತ್ರ ಬಿಜೆಪಿ ಸಂಘಟನೆ ವಿಚಾರದಲ್ಲಿ ಹಿಂದುಳಿದಿರುವುದು ವಾಸ್ತವ.
ಮುಂದಿನ ಬಾರಿಯೂ ಬಿಜೆಪಿ ಪಕ್ಷದಿಂದ ಸ್ಪರ್ಧೆ:
ಇನ್ನು 2023 ರ ಚುನಾವಣೆಯಲ್ಲಿಯೂ ಸಹ ನಾನು ಚನ್ನಪಟ್ಟಣ ದಿಂದಲೇ, ಬಿಜೆಪಿ ಪಕ್ಷದಿಂದಲೇ ಸ್ಪರ್ಧೆ ಮಾಡ್ತೇನೆಂದು ತಿಳಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಯಾರು ಬೇಕಾದರೂ ಅರ್ಜಿ ಹಾಕಿಕೊಳ್ಳಬಹುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ. ಈ ಹಿಂದೆಯೂ ಸಹ ಯೋಗೇಶ್ವರ್ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಯಾವ ಸ್ಥಾನ ನೀಡದಿದ್ದಾಗ ಅವರು ಮುಂದೆ ಕಾಂಗ್ರೆಸ್ ಕದ ತಟ್ಟುತ್ತಾರೆಂಬ ಸುದ್ದಿಗಳು ಹರಿದಾಡಿದ್ದವು. ನಂತರ ಎಂ ಎಲ್ ಸಿ ಆಗಿ ಮಂತ್ರಿಯಾದ ಬಳಿಕ ಯೋಗೇಶ್ವರ್ ಬಿಜೆಪಿ ಯಲ್ಲಿಯೇ ಉಳಿಯುವ ನಿರ್ಧಾರ ಮಾಡಿದರೆಂದು ಹೇಳಲಾಗ್ತಿದೆ. ಆದರೆ ಬಿಜೆಪಿ ಪಕ್ಷದಲ್ಲಿ ಯೋಗೇಶ್ವರ್ ಅವರಿಗೆ ವಿರೋಧಿಗಳು ಹೆಚ್ಚಾಗಿರುವ ಕಾರಣ ಪಕ್ಷದಲ್ಲೇ ಉಳಿಯಲು ಸಾಧ್ಯವಾಗುತ್ತಾ, ಅಥವಾ ಕಾಂಗ್ರೆಸ್ಗೆ ಹೋಗ್ತಾರ ಎಂಬುದು ಕಾಲವೇ ಉತ್ತರಿಸಬೇಕು.