ಕಣ್ಣೀರನ್ನೇ ಮಿಸೈಲ್‌ ಆಗಿ ಬಳಕೆ ಮಾಡಿದರೆ ಈಗ ಏನು ಪ್ರಯೋಜನವಾಗಲ್ಲ: ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಟಾಂಗ್

ಹೈಲೈಟ್ಸ್‌:

  • ಸುಮಲತಾ ವಿರುದ್ಧ ಮತ್ತೆ ಮುಗಿಬಿದ್ದ ರವೀಂದ್ರ ಶ್ರೀಕಂಠಯ್ಯ
  • ಮಂಡ್ಯ ಸಂಸದೆ ಸುಮಲತಾ ಕ್ಷಮೆ ಕೇಳುವಂತೆ ಒತ್ತಾಯಿಸಿದ ಶಾಸಕ
  • ಕಣ್ಣೀರನ್ನೇ ಮಿಸೈಲ್‌ ಆಗಿ ಬಳಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ

ಶ್ರೀರಂಗಪಟ್ಟಣ: ಸಂಸದೆ ಸುಮಲತಾ ಅವರು ಟ್ರ್ಯಾಕ್‌ ಬಿಟ್ಟು ಬೇರೆ ವಿಚಾರಕ್ಕೆ ಬಂದಿದ್ದಾರೆ. ಕೆಆರ್‌ಎಸ್‌ ಬಿರುಕು ಬಿಟ್ಟಿದೆ ಎಂಬ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು. ತಾಲೂಕಿನ ಅರಕೆರೆ ಸರಕಾರಿ ಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಟ್ಯಾಬ್‌ ವಿತರಣೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ನಂತರ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.
ಸಂಸದೆ ತಮ್ಮ ತಪ್ಪು ಮುಚ್ಚಿ ಹಾಕಲು ಟ್ರ್ಯಾಕ್‌ ಬದಲಿಸಿ ಅಕ್ರಮ ಗಣಿಗಾರಿಕೆ ವಿಷಯಕ್ಕೆ ಬಂದಿದ್ದಾರೆ. ಇದು ಸರಿ ಇಲ್ಲ, ವಿದ್ಯುನ್ಮಾನ ಮಾಧ್ಯಮಗಳ ಮುಂದೆ ಕಣ್ಣೀರು ಹಾಕುವುದು ಮಾಡುತ್ತಿದ್ದೀರಿ. ಆ ಶಕ್ತಿಯನ್ನು ಚುನಾವಣೆಯಲ್ಲಿ ಬಳಕೆ ಮಾಡಿ ಗಳಿಸಿಕೊಂಡಿದ್ದೀರಿ. ಇದೀಗ ಮತ್ತೆ ಆ ಕಣ್ಣೀರನ್ನೇ ಮಿಸೈಲ್‌ ಆಗಿ ಬಳಕೆ ಮಾಡಿದರೆ ಪ್ರಯೋಜನವಾಗುವುದಿಲ್ಲಎಂದು ಲೇವಡಿ ಮಾಡಿದರು. ಕೆಆರ್‌ಎಸ್‌ ಡ್ಯಾಂ ಬಿರುಕು ಬಿಟ್ಟಿದೆ ಎಂಬ ವಿಚಾರದಲ್ಲಿ ಕುಮಾರಸ್ವಾಮಿ ಹೇಳಿದ್ದನ್ನೇ ದೊಡ್ಡದು ಮಾಡಿದ್ದೀರಿ.

ನಾನು ಕೂಡ ಡ್ಯಾಂ ಪರಿಶೀಲನೆ ಮಾಡಿ, ಏನು ನ್ಯೂನತೆ ಇಲ್ಲಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಸಂಸದರ ಎಡ, ಬಲ ಇದ್ದವರನ್ನು ಹೋಟೆಲ್‌ಗೆ ಕಳುಹಿಸಿದ್ದರು ಎಂದು ಹೇಳಿದ್ದೆ. ಅದಕ್ಕೆ ನೀವಾಗಲೇ ಗಾಬರಿಯಾಗಿದ್ದೀರಿ. ಮದನ್‌ ಕಳುಹಿಸಿದ್ದೆ ಎಂದು ಒಪ್ಪಿಕೊಂಡಿದ್ದೀರಿ. ಕುಮಾರಸ್ವಾಮಿ ಹೇಳಿದ ಮಾತನ್ನು ಮೂರ್ನಾಲ್ಕು ದಿನ ಎಪಿಸೋಡ್‌ ಮಾಡಿದ್ದೀರಲ್ಲ. ನಿಮ್ಮ ಬಗ್ಗೆ ಮಾತನಾಡಿದ ನನ್ನನ್ನು ಮಣ್ಣಾಗಿ ಹೋಗುತ್ತಾರೆ ಎನ್ನುತ್ತೀರಲ್ಲ, ನೀವೇನು ದೊಡ್ಡ ಶಕ್ತಿ ಅಥವಾ ಸೂಪರ್‌ ಪವರೇ ಎಂದು ಪ್ರಶ್ನಿಸಿದರು.

ಅಂಬರೀಶ್‌ ಅಕ್ರಮ ಗಣಿಗಾರಿಕೆ ಮಾಡಿದ್ದಾರೆ ಎಂದು ನಾನು ಹೇಳಿಲ್ಲ. ಅವರು ಸಂಸತ್‌ ಸದಸ್ಯರಾಗಿದ್ದಾಗ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂದು ಹೇಳಿದ್ದೆ. ಜನ ಹೇಳಿದ್ದಕ್ಕೆಲ್ಲಾ ದಾಖಲೆ ಇರುವುದಿಲ್ಲ. ನಿಮ್ಮ ಜತೆಯಲ್ಲಿ ಇರುವವರು ನಮ್ಮ ಅಧಿಕಾರಿಗಳನ್ನು ಪ್ರಶ್ನೆ ಮಾಡುವುದನ್ನು ಸಹಿಸುವುದಿಲ್ಲ. ಗಣಿಗಾರಿಕೆಯನ್ನು ಲಕ್ಷಾಂತರ ಜನ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.

ಒಂದು ವಾರ ಗಣಿಗಾರಿಕೆ ನಿಲ್ಲಿಸಬಹುದು, ನಂತರವೂ ಗಣಿಗಾರಿಕೆ ಬಂದ್‌ ಮಾಡಿಸಿದರೆ ಜಿಲ್ಲೆಯ ಜನ ದಂಗೆ ಏಳುತ್ತಾರೆ. ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಈಗಾಗಲೇ ಅಭಿವೃದ್ಧಿ ಕಾಮಗಾರಿಗಳಿಗೆ ಉತ್ಪನ್ನಗಳು ಇಲ್ಲದೇ ಜಿಲ್ಲೆಯ ಕಾಮಗಾರಿಗಳು ನಿಂತು ಹೋಗಿವೆ. ನಿಮ್ಮ ಉಸ್ತುವಾರಿ ಮಂತ್ರಿಗಳು ಎಲ್ಲಾ ಗಣಿಗಾರಿಕೆ ನಿಲ್ಲಿಸು ಎಂದು ಹೇಳಿದ್ದಾರೆ. ಹಿಟ್ಲರ್‌ ಸಂಸ್ಕೃತಿ ಬಿಡಿ, ಕಾನೂನುಬದ್ದವಾಗಿ ಗಣಿಗಾರಿಕೆ ನಡೆಸಲು ವ್ಯವಸ್ಥೆ ಮಾಡಬೇಕು ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *