ಕಾರ್ಯಕರ್ತನಿಗೆ ಡಿಕೆಶಿ ಹಲ್ಲೆ: ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರತಿನಿಧಿಗಳ ವರ್ತನೆಯ ಬಗ್ಗೆ ಚರ್ಚೆ

ಹೈಲೈಟ್ಸ್‌:

  • ಮದ್ದೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತನಿಗೆ ಡಿಕೆಶಿ ಕೋಪಗೊಂಡು ಏಟು ಕೊಟ್ಟ ಪ್ರಕರಣ
  • ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ
  • ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರತಿನಿಧಿಗಳ ವರ್ತನೆಯ ಬಗ್ಗೆಯೂ ಪರ ವಿರೋಧ ಚರ್ಚೆ

ಬೆಂಗಳೂರು: ಫೋಟೋಗೆ ಫೋಸ್ ಕೊಡಲು ಬಂದು ಹೆಗಲು ಮೇಲೆ ಕೈಹಾಕಲು ಪ್ರಯತ್ನಿಸಿದ್ದ ಪಕ್ಷದ ಕಾರ್ಯಕರ್ತರೊಬ್ಬರಿಗೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಏಟು ನೀಡಿದ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗುತ್ತಿದೆ. ಕಾರ್ಯಕರ್ತರ ಜೊತೆ ಜನಪ್ರತಿನಿಧಿಗಳು ಈ ರೀತಿ ವರ್ತನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಕುರಿತಾಗಿ ಚರ್ಚೆಗಳು ಶುರುವಾಗಿದೆ. ಕೆಲವರು ಸಮರ್ಥನೆ ಮಾಡಿಕೊಂಡರೆ ಮತ್ತೆ ಕೆಲವರು ಇದು ದುರಂಹಕಾರದ ಪ್ರತೀಕ ಎಂದು ಟೀಕಿಸಿದ್ದಾರೆ. ಇದರ ಜೊತೆಗೆ ಇತರ ರಾಜಕಾರಣಿಗಳು ಇದೇ ರೀತಿ ನಡೆದುಕೊಂಡಿದ್ದ ವಿಡಿಯೋಗಳು ಫೇಸ್‌ ಬುಕ್‌, ವಾಟ್ಸಪ್‌ಗಳಲ್ಲಿ ವೈರಲ್ ಆಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು ತಮ್ಮ ವರ್ತನೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನೀವು ಕೊತ್ವಾಲನ ಶಿಷ್ಯ ಆಗಿರಬಹುದು, ಜೈಲಿಗೂ ಹೋಗಿ ಬಂದಿರಬಹುದು ಆದರೆ ಆ ರಾಕ್ಷಸಿ ಗುಣಗಳನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ. ರಾಜ್ಯಾಧ್ಯಕ್ಷರ ನಡೆ ಇತರರಿಗೆ ಮಾದರಿಯಾಗಿರಲಿ, ಇದು ಬಸವಣ್ಣನ ನಾಡು ಎಂಬುದು ನೆನಪಿರಲಿ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಈ ಟ್ವೀಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಡಿಕೆಶಿ ವರ್ತನೆಯನ್ನು ಖಂಡಿಸಿದರೆ ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಬಿಜೆಪಿ ಮುಖಂಡರ ಹಿಂದಿನ ವರ್ತನೆಗಳನ್ನು ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಹಳೆಯ ಘಟನೆಗಳ ವಿಡಿಯೋ ವೈರಲ್‌

ಡಿಕೆಶಿಯಿಂದ ಕಾರ್ಯಕರ್ತನಿಗೆ ಏಟು ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇತರ ರಾಜಕಾರಣಿಗಳ ಇಂತಹ ವರ್ತನೆಯ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. ಸಾರ್ವಜನಿಕವಾಗಿ ಕಾರ್ಯಕರ್ತರ ಜೊತೆಗೆ ದುರಂಹಕಾರದಿಂದ ನಡೆಸಿಕೊಂಡಿದ್ದ ವಿಡಿಯೋಗಳು ಇದೀಗ ಹರಿದಾಡುತ್ತಿದೆ.

ಈ ಹಿಂದೆ ವರುಣಾ ವಿಧಾನಸಭಾ ವ್ಯಾಪ್ತಿಯ ಗರ್ಗೇಶ್ವರಿ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಬಳಿಕ ಸಭೆಯ ಈ ವೇಳೆ ಟೇಬಲ್ ಕುಟ್ಟಿ ಮಾತನಾಡಿದ್ದ ಕಾಂಗ್ರೆಸ್ ಕಾರ್ಯಕರ್ತೆಯ ಮೇಲೆ ಸಿಟ್ಟಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೋಪಗೊಂಡು ಎಲ್ಲರ ಎದುರೇ ಜಮಾಲರ್ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ಸಿಡಿಮಿಡಿಗೊಂಡಿದ್ದರು. ಈ ವಿಡಿಯೋ ಕೂಡಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಕೌಂಟರ್‌ ಆಗಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡರ ಇಂತಹ ವರ್ತನೆಗಳ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೆ. ಈ ಹಿಂದೆ ಸಿಎಂ ಬಿಎಸ್‌ ಯಡಿಯೂರಪ್ಪ ಸದನದಲ್ಲಿ ಮಾಧ್ಯಮಗಳಿಗೆ ವಿಜಯದ ಸಂಕೇತ ತೋರಿಸುತ್ತಿದ್ದ ಸಂದರ್ಭದಲ್ಲಿ ಅಡ್ಡ ಬಂದಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜತೆ ಗರಂ ಆಗಿದ್ದ ವಿಡಿಯೋ ಕೂಡಾ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಕಾರ್ಯಕರ್ತರ ಜೊತೆ ರಾಜಕೀಯ ಮುಖಂಡರ ಇಂತಹ ವರ್ತನೆ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *