Terrorism: ಭಾರತದ ರೈಲುಗಳ ಸ್ಫೋಟಕ್ಕೆ ಪಾಕ್ ಸಂಚು, ಐಎಸ್ಐನ ಪಿತೂರಿಯನ್ನು ಭೇದಿಸಿದ ಗುಪ್ತಚರ ಸಂಸ್ಥೆ!
ಹೈಲೈಟ್ಸ್:
- ಭಾರತದ ರೈಲುಗಳ ಸ್ಫೋಟಕ್ಕೆ ಪಾಕಿಸ್ತಾನದ ಉಗ್ರರ ಸಂಚು
- ಯುಪಿ, ಬಿಹಾರದ ಕಾರ್ಮಿಕರನ್ನು ಹೊತ್ತೊಯ್ಯುವ ಟ್ರೇನ್
- ಸ್ಪೋಟಿಸುವ ಯೋಜನೆಯನ್ನು ಭೇದಿಸಿದ ಗುಪ್ತಚರ ಸಂಸ್ಥೆ
ಹೊಸದಿಲ್ಲಿ: ಜಮ್ಮು-ಕಾಶ್ಮೀರ ಗಡಿಯಲ್ಲಿಉಗ್ರರನ್ನು ಛೂಬಿಟ್ಟು ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಸದಾ ಯತ್ನಿಸುವ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ, ಈಗ ದೇಶದಲ್ಲಿ ರೈಲುಗಳನ್ನು ಸ್ಫೋಟಿಸಲು ಸಂಚು ರೂಪಿಸಿದೆ.
ಪಂಜಾಬ್ ಸೇರಿ ಹಲವು ರಾಜ್ಯಗಳಿಂದ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಕಾರ್ಮಿಕರು ಸಂಚರಿಸುವ ರೈಲುಗಳನ್ನು ಗುರಿಯಾಗಿಸಿ ದಾಳಿ ಮಾಡಲು ಐಎಸ್ಐ ರೂಪಿಸಿದ ಸಂಚನ್ನು ಗುಪ್ತಚರ ಸಂಸ್ಥೆಗಳು ಭೇದಿಸಿವೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ”ಹೆಚ್ಚಾಗಿ ಕಾರ್ಮಿಕರು ಸಂಚರಿಸುವ ರೈಲುಗಳನ್ನೇ ಗುರಿಯಾಗಿಸಿ ದಾಳಿ ಮಾಡಿದರೆ ನೂರಾರು ಕಾರ್ಮಿಕರು ಸಾಯುತ್ತಾರೆ. ಇದರಿಂದ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬುದು ನೆರೆ ರಾಷ್ಟ್ರದ ಸಂಚಾಗಿದೆ,” ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರೈಲು ಪೊಲೀಸ್ ಕೇಂದ್ರ ಕಚೇರಿ, ಎಸ್ಪಿ ಸೇರಿ ಹಲವು ಅಧಿಕಾರಿಗಳು ಹಾಗೂ ಕಚೇರಿಗಳಿಗೆ ಬಿಹಾರ ರೈಲ್ವೆ ಪೊಲೀಸ್ ಪತ್ರವೊಂದನ್ನು ಬರೆದಿದ್ದು, ಶ್ವಾನ ಪಡೆ ಹಾಗೂ ಬಾಂಬ್ ನಿಷ್ಕಿ್ರಯ ದಳವು ಯಾವುದೇ ಕ್ಷಣದಲ್ಲೂ ಕಾರ್ಯನಿರ್ವಹಿಸಲು ಸಿದ್ಧವಿರಬೇಕು ಎಂಬುದಾಗಿ ಸೂಚಿಸಲಾಗಿದೆ.
ರಾಜಸ್ಥಾನದಲ್ಲಿಕಟ್ಟೆಚ್ಚರ!
ಗಡಿಗಳಲ್ಲಿಉಗ್ರ ಚಟುವಟಿಕೆ ಹೆಚ್ಚಾಗಿರುವ ಹಾಗೂ ದಾಳಿ ಭೀತಿಯಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಹಲವು ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಶ್ರೀ ಗಂಗಾನಗರ, ಕರಾನ್ಪುರ, ರೈಸಿಂಗ್ ನಗರ, ಅನೂಪ್ಗಢ ಸೇರಿ ಹಲವೆಡೆ ಸೆಪ್ಟೆಂಬರ್ 11ರವರೆಗೆ ಹಲವು ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ. ಸೆಕ್ಷನ್ 144 ಜಾರಿ, ರಾತ್ರಿ 7ರಿಂದ ಬೆಳಗ್ಗೆ 6 ಗಂಟೆವರೆಗೆ ಜನ ಸಂಚಾರ ನಿಷೇಧ, ರಾತ್ರಿ ಪಟಾಕಿ ಸಿಡಿಸುವುದು ನಿಷೇಧ ಸೇರಿ ಹಲವು ನಿಯಮ ಜಾರಿಗೊಳಿಸಲಾಗಿದೆ.