US COVID-19: ಅಮೆರಿಕಾದಲ್ಲಿ ಮತ್ತೆ ಕೊರೋನಾ ಸ್ಫೋಟ; 3 ವಾರಗಳಲ್ಲಿ ಕೇಸ್ ಡಬಲ್
ಅಮೆರಿಕಾದಲ್ಲಿ ಕೆಲ ತಿಂಗಳಿನಿಂದ ಕಡಿಮೆಯಾಗಿದ್ದ ಕೊರೋನಾ ಆರ್ಭಟ ಈಗ ಮತ್ತೆ ಹೆಚ್ಚಾಗಿದೆ. ಕಳೆದ ಮೂರು ವಾರಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಡೆಲ್ಟಾ ರೂಪಾಂತರಿ ವೈರಸ್ ಅತೀ ವೇಗವಾಗಿ ದೇಶಾದ್ಯಂತ ಹರಡುತ್ತಿದ್ದು, ಜನರಲ್ಲಿ ಮತ್ತೆ ಆತಂಕ ಹುಟ್ಟಿಸಿದೆ.
ಸೋಮವಾರ ಒಂದೇ ದಿನ ಅಮೆರಿಕಾದಲ್ಲಿ 23,600 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜೂನ್ 23ರಂದು 11,300 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದವು. ಈಗ ಕೊರೋನಾ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಮಾಹಿತಿ ನೀಡಿದೆ.
ಅಮೆರಿಕಾದಲ್ಲಿ ಮೈನ್ ಮತ್ತು ಸೌತ್ ಡಕೋಟ ಎಂಬ ಎರಡು ರಾಜ್ಯಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆ ಕಳೆದ 2 ವಾರಗಳಿಂದ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ.
ಜುಲೈ 4ನೇ ವಾರದ ನಂತರ ಇನ್ನೂ ಹೆಚ್ಚಿನ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದು ಕಾಕತಾಳೀಯವಲ್ಲ ಎಂದು ಸೇಂಟ್ ಲೂಯಿಸ್ನಲ್ಲಿರುವ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ನ ಸಾಂಕ್ರಾಮಿಕ ರೋಗ ವಿಭಾಗದ ಸಹ ನಿರ್ದೇಶಕ ಡಾ.ಬಿಲ್ ಪೌಡರ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಮಯದಲ್ಲಿ ಕೊರೋನಾ ವಿರುದ್ಧ ಹೋರಾಡಲು ಅಮೆರಿಕಾದ ಅನೇಕ ಕಡೆ ಜನರಿಗೆ ತ್ವರಿತವಾಗಿ ಲಸಿಕೆ ನೀಡಲಾಗುತ್ತಿದೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ರೂಪಾಂತರಿ ಕೊರೋನಾ ವೈರಸ್ ಈಗ ಎಲ್ಲೆಡೆ ಅತೀ ವೇಗವಾಗಿ ಹರಡುತ್ತಿದೆ.
ಅಮೆರಿಕಾದಲ್ಲಿ ಈವರೆಗೆ 55.6 ಜನರು ಕೋವಿಡ್-19ನ ಮೊದಲ ಲಸಿಕೆ ಪಡೆದಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ.ಒಟ್ಟು 5 ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಕಳೆದ 2 ವಾರಗಳಲ್ಲಿ ದ್ವಿಗುಣಗೊಂಡಿವೆ. ಜೊತೆಗೆ ಈ ರಾಜ್ಯಗಳಲ್ಲಿ ವ್ಯಾಕ್ಸಿನೇಶನ್ ದರ ಕಡಿಮೆ ಇದೆ. ಮಿಸೌರಿಯಲ್ಲಿ ಶೇ. 45.9, ಅರ್ಕಾನ್ಸಾಸ್ನಲ್ಲಿ ಶೇ.43, ನೆವಾಡಾದಲ್ಲಿ ಶೇ.50.9, ಲೂಯಿಸಿಯಾನದಲ್ಲಿ ಸೇ.39.2 ಮತ್ತು ಉತಾಹ್ನಲ್ಲಿ ಶೇ.49.5 ಲಸಿಕೆ ದರ ಇದ್ದು, ಈ ರಾಜ್ಯಗಳು ಅತೀ ಕಡಿಮೆ ವ್ಯಾಕ್ಸಿನೇಷನ್ ರೇಟ್ಸ್ ಹೊಂದಿವೆ ಎಂದು ತಿಳಿದು ಬಂದಿದೆ.
ದಿನೇ ದಿನೇ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ, ಲಾಸ್ ಏಂಜಲೀಸ್ ಕೌಂಟಿ ಮತ್ತು ಸೇಂಟ್ ಲೂಯಿಸ್ನಂತಹ ಸ್ಥಳಗಳಲ್ಲಿ ಆರೋಗ್ಯಾಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಳ್ಳಿ ಎಂದು ಜನರಿಗೆ ಮನವಿ ಮಾಡುತ್ತಿದ್ದಾರೆ.
ಮಿಸೌರಿ ಮತ್ತು ಆರ್ಕಾನ್ಸಾಸ್ನಿಂದ ಚಿಕಾಗೋಗೆ ಬರುವ ಪ್ರಯಾಣಿಕರು ಲಸಿಕೆ ಹಾಕಿಸಿಕೊಂಡಿರದಿದ್ದರೆ, ಅವರನ್ನು 10 ದಿನ ಕ್ವಾರಂಟೈನ್ಲ್ಲಿ ಇರಿಸಲಾಗುತ್ತದೆ. ಇಲ್ಲವೇ ಅವರು ಕೋವಿಡ್-19 ನೆಗೆಟಿವ್ ವರದಿ ತೋರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ