Karnataka Weather Update| ದೇಶದಾದ್ಯಂತ ವ್ಯಾಪಿಸಿದ ನೈರುತ್ಯ ಮುಂಗಾರು, ಭಾರತದೆಲ್ಲೆಡೆ ವ್ಯಾಪಕ ಮಳೆ; ಹಲವೆಡೆ ರೆಡ್ ಅಲರ್ಟ್!
Karnataka Weather Update (ಜುಲೈ 14); ರಾಜ್ಯದಲ್ಲಿ ಈಗಾಗಲೇ ನೈರುತ್ಯ ಮಾನ್ಸೂನ್ನಿಂದಾಗಿ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ, ಜುಲೈ 16ರವರೆಗೂ ಕರ್ನಾಟಕದಲ್ಲಿ ಅತಿ ಹೆಚ್ಚಿನ ಮಳೆಯಾಗುವುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಅವಧಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಧಿಕ ಮಟ್ಟದಲ್ಲಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. ಮಂಗಳವಾರ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ರಾಜ್ಯದ ಒಳನಾಡಿನಲ್ಲಿ ಕೂಡ ಉತ್ತಮ ಮಳೆಯಾಗಿದೆ. ಇನ್ನೂ ಬುಧವಾರ ಬೆಳಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪಿ ಮಳೆಯಾಗುತ್ತಿದೆ. ದೇಶದಲ್ಲೂ ಮೊದಲ ಬಾರಿಗೆ ನೈರುತ್ಯ ಮುಂಗಾರು ಎಲ್ಲೆಡೆ ವ್ಯಾಪಿಸಿದ್ದು, ದೇಶದಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮುಂದಿನ ಜುಲೈ 16ರವರೆಗೂ ಮಳೆ ಇದೇ ರೀತಿ ಮುಂದುವರೆಯಲಿದ್ದು, ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯಿಂದಾಗಿ ದೇಶದ ಅನೇಕ ಭಾಗಗಳಲ್ಲಿ ಈಗಾಗಗಲೇ ರೆಡ್ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ.
ದೇಶದೆಲ್ಲೆಡೆ ನೈರುತ್ಯ ಮುಂಗಾರು ಅಬ್ಬರ ಜೋರಾಗಿದ್ದು, ದಕ್ಷಿಣ ಭಾರತ ಸೇರಿದಂತೆ ಉತ್ತರ ಭಾರದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಿದೆ. ಸೋಮವಾರ-ಮಂಗಳವಾರ ಸುರಿದ ಭಾರಿ ಮಳೆಗೆ ಉತ್ತರ ಪ್ರದೇಶ ಮತ್ತು ರಾಜಸ್ಥಾನ್, ಗುಜರಾತ್, ಹಿಮಾಚಲ ಪ್ರದೇಶದ ಜನ ಜೀವನ ಅಸ್ತ ವ್ಯಸ್ತವಾಗಿದೆ. ಈ ನಡುವೆ ಸುಡುವ ಬಿಸಿಲಿನಿಂದ ತತ್ತರಿಸಿರುವ ದೆಹಲಿ ಜನರು ಮಳೆಗಾಗಿ ಎದುರು ನೋಡುತ್ತಿದ್ದಾರೆ.
ಕೇರಳದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಈಗಾಗಲೇ ರಾಜ್ಯದ ಐದು ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ಬಲವಾದ ಗಾಳಿ ಬೀಸುವ ಹಿನ್ನಲೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಡುವೆ ಈ ಗಾಳಿ ಗುಜರಾತ್ ವರೆಗೂ ಸಾಗಲಿದ್ದು, ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಕರ್ನಾಟಕ
ಕಳೆದ ಎರಡು ಮೂರು ದಿನಗಳಿಂದ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಕಳೆದೊಂದು ವಾರದಿಂದ ಕೊಂಚ ವಿರಾಮ ನೀಡಿದ್ದ ಮಳೆ ಕಳೆದ ಮೂರು ದಿನಗಳಿಂದ ಬಿರುಸು ಕೊಂಡಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನು ಮೂರು ದಿನ ಇದೇ ರೀತಿ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಏಳುವ ಗಾಳಿ ಯಿಂದ ಅಲೆಗಳ ಹೊಡೆತ ಇನ್ನಷ್ಟು ಹೆಚ್ಚಲಿದ್ದು, ಕಡಲ ಕೊರೆತ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ಈ ಪ್ರದೇಶಗಳಲ್ಲಿ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ.
ಕೇರಳ:
ಜೂನ್ನಲ್ಲಿ ವಾಡಿಕೆ ಮಳೆ ಕೊರತೆ ಅನುಭವಿಸಿದ್ದ ಕೇರಳದಲ್ಲಿ ಮುಂದಿನ ನಾಲ್ಕು ದಿನ ಭಾರೀ ಪ್ರಮಾಣದ ಮಳೆಯಾಗಲಿದ್ದು, ಇಡುಕ್ಕಿ, ಕಣ್ಣೂರು, ಕಸರಾಗೋಡ್ ಆರೆಂಜ್ ಆಲರ್ಟ್, ಮತ್ತು ಉಳಿದ ಜಿಲ್ಲೆಗಳಲ್ಲಿ ಹಳದಿ ಆಲರ್ಟ್ ಘೋಷಿಸಲಾಗಿದೆ. ಮಳೆ ಹಿನ್ನಲೆ ಜನರು ಎಚ್ಚರಿಕೆ ವಹಿಸುವಂತೆ ಐಎಂಡಿ ತಿಳಿಸಿದೆ. ಕೇರಳದಲ್ಲಿ ಕಳೆದ 39 ವರ್ಷಗಳಲ್ಲಿಯೇ ಅತಿ ಕಡಿಮೆ ಯಾಗಿದೆ. ರಾಜ್ಯದಲ್ಲಿ ಕೇವಲ 408.44 ಮಿಮೀ ಮಳೆಯಾಗಿದೆ. ಇದು ಶೇ 36ರಷ್ಟು ಕಡಿಮೆ ಮಳೆ. ಜೂನ್ನಲ್ಲಿ ಸಾಮಾನ್ಯವಾಗಿ 643 ಮಿ.ಮೀ ವಾಡಿಕೆ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತಮಿಳುನಾಡು , ಆಂಧ್ರತಮಿಳುನಾಡಿನ ಕೊಯಿಮತ್ತೂರು, ಥೆನಿ, ನೀಲಿಗಿರಿಯ ಪಶ್ವಿಮ ಘಟ್ಟದಲ್ಲಿ ಕೂಡ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ. ಬಂಗಾಳ ಕೊಲ್ಲಿಯ ಮಧ್ಯ ಪಶ್ಚಿಮ ಮತ್ತು ವಾಯುವ್ಯದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಲಿದೆ. ಈ ಹಿನ್ನಲೆ ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲೂ ಕೂಡ ಮಳೆಯಾಗಲಿದೆ. ಆಂಧ್ರ ಪ್ರದೇಶದ ರಾಯಲ ಸೀಮಾದಲ್ಲಿ ಕೂಡ ಸಾಧಾರಣಾ ಮಳೆಯಾದರೆ, ಪೂರ್ವ ಗೋದಾವರಿ, ವಿಶಾಖ ಪಟ್ಟಣಂನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.