ಗಡಿಯಲ್ಲಿ ಮತ್ತೆ ಉದ್ಧಟತನ, ಚೀನಾಕ್ಕೆ ಕಟು ಎಚ್ಚರಿಕೆ ನೀಡಿದ ಭಾರತ

ಹೈಲೈಟ್ಸ್‌:

  • ತಜಕಿಸ್ತಾನದ ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ ಸಭೆ ಭಾಗವಾಗಿ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಜತೆ 1 ಗಂಟೆ ಮಾತುಕತೆ ನಡೆಸಿದ ಎಸ್‌ ಜೈಶಂಕರ್‌
  • ಭಾರತದ ನಿಲುವನ್ನು ಸ್ಪಷ್ಟವಾಗಿ ರವಾನಿಸಿದ ವಿದೇಶಾಂಗ ಸಚಿವರು
  • ಗಡಿಯಲ್ಲಿ ಏಕಪಕ್ಷೀಯ ಚಟುವಟಿಕೆಗಳನ್ನು ಭಾರತ ಸಹಿಸುವುದಿಲ್ಲ ಎಂದ ಎಸ್‌ ಜೈಶಂಕರ್‌

ದುಶಾಂಬೆ: ಲಡಾಕ್‌ ಗಡಿಯಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿ ಉದ್ಧಟತನ ಮಾಡುವ ಚೀನಾಗೆ ವಿದೇಶಾಂಗ ವ್ಯವಹಾರಗಳ ಸಚಿವರು ನೇರವಾಗಿಯೇ ಎಚ್ಚರಿಕೆ ನೀಡಿದ್ದು, ”ಗಡಿಯಲ್ಲಿ ಏಕಪಕ್ಷೀಯ ಚಟುವಟಿಕೆಗಳನ್ನು ಭಾರತ ಸಹಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ತಜಕಿಸ್ತಾನದ ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆ ಭಾಗವಾಗಿ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಜತೆ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದು, ಭಾರತದ ನಿಲುವನ್ನು ಸ್ಪಷ್ಟವಾಗಿ ರವಾನಿಸಿದ್ದಾರೆ.

“ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯ ಚಟುವಟಿಕೆ ಸೇರಿ ಹಲವು ವಿಷಯಗಳ ಕುರಿತು ಚೀನಾ ವಿದೇಶಾಂಗ ಸಚಿವರ ಜತೆ ಚರ್ಚಿಸಲಾಗಿದೆ. ಗಡಿಯಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ಸಹಿಸುವುದಿಲ್ಲ. ಒಪ್ಪಂದದ ಅನ್ವಯ ಯಥಾಸ್ಥಿತಿ ಸ್ಥಾಪನೆ ಹಾಗೂ ಶಾಂತಿಯುತ ವಾತಾವರಣ ನಿರ್ಮಾಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದಾಗಿ ತಿಳಿಸಿದ್ದೇನೆ,” ಎಂದು ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

ಕಳೆದ ವರ್ಷ ಹಲವು ಸುತ್ತಿನ ಮಾತುಕತೆ ಬಳಿಕ ಲಡಾಕ್‌ ಗಡಿಯಲ್ಲಿ ಉಭಯ ದೇಶಗಳ ಸೇನೆ ವಾಪಸಾತಿ ಪ್ರಕ್ರಿಯೆ ನಡೆಯುತ್ತಿದೆ.

ರಾಹುಲ್‌ ಗಾಂಧಿ ಸಭಾತ್ಯಾಗ

ರಕ್ಷಣೆಗೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಚೀನಾ ಜತೆಗಿನ ಗಡಿ ಸಂಘರ್ಷದ ಕುರಿತು ಚರ್ಚೆಗೆ ಅವಕಾಶ ನೀಡದ್ದಕ್ಕೆ ಅಸಮಾಧಾನಗೊಂಡು ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಸಂಸದರು ಬಹಿಷ್ಕರಿಸಿ ಹೊರನಡೆದಿದ್ದಾರೆ. ಬುಧವಾರ ನಡೆದ ಸಮಿತಿ ಸಭೆಯಲ್ಲಿ ರಾಹುಲ್‌ ವಾಸ್ತವ ಗಡಿ ನಿಯಂತ್ರಣ ರೇಖೆ ಬಿಕ್ಕಟ್ಟಿನ ಬಗ್ಗೆ ಧ್ವನಿ ಎತ್ತಿದಾಗ ಬಿಜೆಪಿ ಸದಸ್ಯರು ವಿರೋಧಿಸಿದರು. ಆಗ ರಾಹುಲ್‌ ಅವರು, ”ಸದ್ಯ ದೇಶಕ್ಕೆ ಸಂಚಕಾರ ಆಗಿರುವ ತಾಲಿಬಾನ್‌-ಅಫಘಾನಿಸ್ತಾನ ಗಡಿ ಸಮಸ್ಯೆ, ಚೀನಾ ಜತೆಗಿನ ಬಿಕ್ಕಟ್ಟುಗಳ ಬಗ್ಗೆ ಚರ್ಚಿಸಿ,” ಎಂದು ಪಟ್ಟುಹಿಡಿದರು.

ಸಮಿತಿ ಅಧ್ಯಕ್ಷರು ಅದಕ್ಕೆ ಅವಕಾಶ ನೀಡದೇ ಇದ್ದಾಗ ರಾಹುಲ್‌ ಮತ್ತು ಅವರ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು. ಕಳೆದ ವರ್ಷ ಡಿಸೆಂಬರ್‌ನಲ್ಲಿಯೂ ರಕ್ಷಣಾ ಸಮಿತಿ ಸಭೆಯಿಂದ ರಾಹುಲ್‌ ಹೊರನಡೆದಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *