4 ವರ್ಷದ ಬಾಲಕ ಕಾಳಗಿ ಹಿರೇಮಠದ ಉತ್ತರಾಧಿಕಾರಿ
ಸಾಮಾನ್ಯವಾಗಿ ಯಾವುದೇ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಬೇಕಾದರೆ ಜ್ಞಾನ, ತಿಳುವಳಿಕೆ, ಸಂಪಾದನೆ, ಅನುಭವ ಹೊಂದಿರಬೇಕು ಮತ್ತು ಅದಕ್ಕೊಂದು ಸಮಯ ಮತ್ತು ವಯಸ್ಸಿನ ಮಿತಿ ಇರುತ್ತದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಇಲ್ಲಿನ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ವಿಭಿನ್ನವಾಗಿದ್ದು, ನಾಲ್ಕು ವರ್ಷ ವಯಸ್ಸಿನ ನೀಲಕಂಠಸ್ವಾಮಿ ಎಂಬ ಬಾಲಕನಿಗೆ ನೇಮಿಸಲಾಗಿದೆ.
ಕಾಳಗಿ ಹಿರೇಮಠದ ಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯ ಸ್ವಾಮೀಜಿ (45) ಅವರು ಕಳೆದ 12ರಂದು ವಿಧಿವಶರಾದರು. ಪಟ್ಟಣದಲ್ಲಿ ಲಿಂಗೈಕ್ಯ ಸ್ವಾಮೀಜಿಯ ಅಂತ್ಯಕ್ರಿಯೆ ನೆರವೇರಿತ್ತು. ಇದೇ ಸಂದರ್ಭದಲ್ಲಿ ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ನಾಲ್ಕು ವರ್ಷದ ಬಾಲಕನಿಗೆ ಮುಂದಿನ ಮಠದ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿ, ಕೆಲ ವಿಧಿ ವಿಧಾನಗಳನ್ನು ಕೂಡ ನೆರವೇರಿಸಲಾಯಿತು.
ಕಲಬುರ್ಗಿ ಜಿಲ್ಲೆಯ ಹಿರೇನಾಗಾಂವ್ ಮಠದ ಲಿಂಗೈಕ್ಯರಾಗಿರುವ ಶಿವಬಸವ ಶಿವಾಚಾರ್ಯ ಸ್ವಾಮೀಜಿ ತಲೆಮೇಲಿದ್ದ ಹಸಿರು ಶಾಲು, ಕೈಯಲ್ಲಿದ್ದ ಬೆತ್ತವನ್ನು ಉತ್ತರಾಧಿಕಾರಿಯಾಗಿ ನೇಮಕವಾದ ನೀಲಕಂಠಯ್ಯಸ್ವಾಮಿಯವರಿಗೆ ಹಸ್ತಾಂತರ ಮಾಡಲಾಗಿದೆ.
ನಾಲ್ಕು ವರ್ಷದ ಬಾಲಕ ನೀಲಕಂಠಸ್ವಾಮಿ ಬೇರಾರೂ ಅಲ್ಲ. ಲಿಂಗೈಕ್ಯರಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿಯ ಪೂರ್ವಾಶ್ರಮದ ಸಹೋದರ ಗುರುನಂಜಯ್ಯ ಹಿರೇಮಠ್ ಅವರ ಪುತ್ರ. ಇನ್ನೂ ಶಾಲೆಯ ಮೆಟ್ಟಿಲು ಹತ್ತದ ಬಾಲಕ ಇದೀಗ ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ.
ಸದ್ಯ ನೀಲಕಂಠಸ್ವಾಮಿ ಮಠದ ಉತ್ತರಾಧಿಕಾರಿಯಾಗಿದ್ದರೂ ಕೂಡ ಮಠದ ಉಸ್ತುವಾರಿಯನ್ನು ಬಾಲಕ ಹದಿನೆಂಟು ವರ್ಷದವನಾಗುವವರೆಗೂ ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ನಿರ್ವಹಿಸಲಿದ್ದಾರೆ.
ಶಿವಾಚಾರ್ಯ ಪರಂಪರೆಯಲ್ಲಿ ಎರಡು ರೀತಿಯ ಮಠಗಳಿವೆ. ಒಂದು ಪುತ್ರವರ್ಗ ಪೀಠ, ಮತ್ತೊಂದು ಶಿಷ್ಯ ಪರಂಪರೆಯ ಪೀಠ. ಪುತ್ರವರ್ಗ ಪೀಠ ಪರಂಪರೆಯಲ್ಲಿ ಲಿಂಗೈಕ್ಯರಾಗಿರುವ ಸ್ವಾಮೀಜಿಗಳ ಕುಟುಂಬದವರಲ್ಲಿ ಯಾರಾದರೂ ಇದ್ದರೆ, ಅವರನ್ನೇ ಮಠದ ಮುಂದಿನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗುತ್ತದೆ. ಅವರ ಕುಟುಂಬದಲ್ಲಿ ಯಾರೂ ಇರದಿದ್ದರೆ ಇದ್ದರೂ ಸ್ವಾಮೀಜಿಗಳಾಗಲು ಆಸಕ್ತಿ ತೋರದೇ ಇದ್ದರೆ ಮಾತ್ರ ಬೇರೆಯವರನ್ನು ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಪರಂಪರೆ ಇದೆ.
ಶಿಷ್ಯ ವರ್ಗದ ಪೀಠಗಳಲ್ಲಿ ಬೇರೆಯವರನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ಅವಕಾಶವಿದೆ. ಸಂಸ್ಥಾನ ಹಿರೇಮಠ ಪುತ್ರವರ್ಗ ಪರಂಪರೆಯ ಮಠವಾಗಿದೆ. ಅವರ ಕುಟುಂಬದ ಒಪ್ಪಿಗೆ ಪ್ರಕಾರ, ನಾಲ್ಕು ವರ್ಷದ ಬಾಲಕನಿಗೆ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ ಎಂದು ಇಲ್ಲಿನ ಸ್ವಾಮೀಜಿಗಳು ತಿಳಿಸಿದ್ದಾರೆ.
ಸದ್ಯ ಪೀಠಾಧಿಪತಿಯಾಗಿದ್ದವರು ಲಿಂಗೈಕ್ಯರಾದ ಮೇಲೆ ಮಠದ ಪೀಠಾಧಿಪತಿ ಸ್ಥಾನವನ್ನು ಖಾಲಿ ಬಿಡಲು ಆಗುವುದಿಲ್ಲ. ಹೀಗಾಗಿ ಅವರ ಕುಟುಂಬದಲ್ಲಿದ್ದವರಿಗೆ ಪೀಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಬೇಕಾಗುತ್ತದೆ. ಅವರ ಕುಟುಂಬದವರು ನಿರ್ಧಾರ ಮಾಡಿ ನೀಲಕಂಠಸ್ವಾಮಿಗೆ ಉತ್ತರಾಧಿಕಾರಿ ನೇಮಕ ಮಾಡಲು ಒಪ್ಪಿಗೆ ನೀಡಿದ್ದರಿಂದ ಬಾಲಕನಿಗೆ ಉತ್ತರಾಧಿಕಾರಿಗಳನ್ನಾಗಿ ಮಾಡಲಾಗಿದೆ.