ಕಲ್ಯಾಣ ಕರ್ನಾಟಕದ ಕಲ್ಯಾಣ ಕುರಿತು ಜು. 18ರಂದು ಕೋರ್ ಕಮಿಟಿ ಸಭೆ
ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಬರುವ ಜು. 18ರಂದು ಬೆಳಿಗ್ಗೆ 11.30 ಗಂಟೆಗೆ ಸಮಿತಿಯ ಕೋರ್ ಕಮೀಟಿ ಸಭೆಯನ್ನು ಸಮಿತಿಯ ಅಧ್ಯಕ್ಷ ಲಕ್ಷ್ಮಣ್ ದಸ್ತಿಯವರ ಅಧ್ಯಕ್ಷತೆಯಲ್ಲಿ ನಗರದ ಹಿಂದಿ ಪ್ರಚಾರ ಸಭಾದಲ್ಲಿ ಜರುಗಲಿದೆ ಎಂದು ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಕೊರೋನಾ 2ನೇ ಅಲೆಯ ಹಿನ್ನಲೆಯಲ್ಲಿ ಸಮಿತಿಯ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಪರ ಹಮ್ಮಿಕೊಂಡಿರುವ ಚಟುವಟಿಕೆಗಳು ಸ್ಥಗಿತಗೊಳಿಸಲಾಗಿತ್ತು. ಇನ್ನು ಮುಂದೆ ನಮ್ಮ ಭಾಗದ ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ಮತ್ತು ಜ್ವಲಂತ ಸಮಸ್ಯೆಗಳಾದ, ಪ್ರಸ್ತುತ ಸರ್ಕಾರ ವಿಜಯಭಾಸ್ಕರ್ ಸಮಿತಿಯ ಆಡಳಿತ ಸುಧಾರಣೆಯ ವರದಿಯಂತೆ ಪ್ರಾದೇಶಿಕ ಆಯುಕ್ತರ ಕಚೇರಿಯ ರದ್ದತಿ, 371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಹಿಂದೆ ಹಮ್ಮಿಕೊಂಡ ಜನಪ್ರತಿನಿಧಿಗಳ ಕಡೆ ಕಲ್ಯಾಣ ನಡೆ ಅಭಿಯಾನದ ಕುರಿತು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಾದ ಏಮ್ಸ್ ಮತ್ತು ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿದಂತೆ ಇನ್ನೀತರ ಮಹತ್ವದ ಯೋಜನೆಗಳ ಬಗ್ಗೆ, 371ನೇ (ಜೆ) ಕಲಂ ತಿದ್ದುಪಡಿಯ ಅನುಷ್ಠಾನದಲ್ಲಾಗುತ್ತಿರುವ ಲೋಪಗಳ ನಿವಾರಣೆಗೆ ಸರಕಾರದ ಪರಿಷ್ಕೃತ ನಿಯಮಗಳನ್ನು ರಚಿಸಲು ಸರ್ಕಾರ ಅಧಿಕೃತವಾಗಿ ಘೋಷಿಸಿರುವಂತೆ ಒತ್ತಾಯ ತರಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಅನುದಾನ ಮಂಜೂರಾತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ತಾರತಮ್ಯ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚಿಸುವುದರ ಜೊತೆಗೆ ಏಳು ಜಿಲ್ಲೆಗಳಲ್ಲಿ ಕಾಲಮಿತಿಯಲ್ಲಿ ಕೊರೊನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸಂಘಟನೆಯನ್ನು ಕೈಗೊಳ್ಳುವುದರ ಜೊತೆಗೆ ಹೋರಾಟ ಹಮ್ಮಿಕೊಳ್ಳುವುದರ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.