ಅಕ್ಕಿ, ಗೋಧಿ ಆಯ್ತು ಈಗ ಮಕ್ಕಳಿಗೆ ಸಿಗಲಿದೆ ಹಣ: ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಸೇರಲಿದೆ ಬಿಸಿಯೂಟದ ಬಾಬ್ತು, ಯಾರಿಗೆ ಎಷ್ಟು?

ಹೈಲೈಟ್ಸ್‌:

  • ಬಿಸಿಯೂಟ ತಯಾರಿಗೆ ತಗುಲಿದ ಖರ್ಚು ಶೀಘ್ರವೇ ವೈಯಕ್ತಿಕ ಖಾತೆಗೆ ಜಮಾ
  • 1ರಿಂದ 5ನೇ ತರಗತಿ: 250 ರೂ., 6ರಿಂದ 8ನೇ ತರಗತಿ: 390 ರೂ. ಸಿಗಲಿದೆ
  • ಅಕ್ಕಿ ಮತ್ತು ಗೋಧಿ ನೀಡಿದ ಬಳಿಕ ಪೂರಕ ವಸ್ತು ಖರೀದಿಗೆ ಹಣ

ಜಯಂತ್‌ ಗಂಗವಾಡಿ ಬೆಂಗಳೂರು
ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ಉತ್ತಮ ಆಹಾರ ನೀಡುವ ಉದ್ದೇಶದಿಂದ ಈ ಬಾರಿ ಬಿಸಿಯೂಟದ ಅಕ್ಕಿ ಮತ್ತು ಗೋಧಿಯನ್ನು ಮನೆಗಳಿಗೇ ತಲುಪಿಸಲಾಗಿತ್ತು. ಇದೀಗ ಇದನ್ನು ಅಹಾರವಾಗಿ ಪರಿವರ್ತಿಸಲು ತಗುಲಿದ ವೆಚ್ಚವನ್ನೂ ಭರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಮೇ ಮತ್ತು ಜೂನ್‌ ತಿಂಗಳ ಬೇಸಿಗೆ ರಜೆಯ 50 ದಿನಗಳಿಗೆ ಅನ್ವಯಿಸಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿಯ 4 ಲಕ್ಷ ಮಕ್ಕಳಿಗೆ ಈ ಹಣ ದೊರೆಯಲಿದೆ. 1ರಿಂದ 5ನೇ ತರಗತಿ ಮಕ್ಕಳಿಗೆ ತಲಾ 250 ರೂ, 6ರಿಂದ 8ನೇ ತರಗತಿ ಮಕ್ಕಳಿಗೆ ತಲಾ 390 ರೂ. ದೊರೆಯಲಿದೆ. ‘ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚ(ಕುಕ್ಕಿಂಗ್‌ ಕಾಸ್ಟ್‌)’ ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ‘ನೇರ ನಗದು ವರ್ಗಾವಣೆ’ ಮೂಲಕ ಜಮೆ ಮಾಡಲಾಗುತ್ತದೆ.

ಕೇಂದ್ರ ಶಿಕ್ಷಣ ಮಂತ್ರಾಲಯದ ನಿರ್ದೇಶನದ ಮೇರೆಗೆ ನೇರ ನಗದು ಜಮೆ ಮಾಡಲು ಇಲಾಖೆ ಮುಂದಾಗಿದ್ದು, ಬ್ಯಾಂಕ್‌ ಖಾತೆ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಸಮೀಪದ ರಾಷ್ಟ್ರೀಕೃತ ಬ್ಯಾಂಕ್‌, ಗ್ರಾಮೀಣ ಬ್ಯಾಂಕ್‌ ಹಾಗೂ ಅಂಚೆ ಕಚೇರಿಗಳಲ್ಲಿ’ಶೂನ್ಯ ಬ್ಯಾಂಕ್‌ ಖಾತೆ’ಗಳನ್ನು ತೆರೆಯಲು ಕ್ರಮ ಕೈಗೊಳ್ಳುವಂತೆ ಮುಖ್ಯೋಪಾಧ್ಯಾಯರಿಗೆ ಸೂಚಿಸಿದೆ.

ಪೌಷ್ಟಿಕತೆ ಹೆಚ್ಚಿಸಲು ಕ್ರಮ
ಕೋವಿಡ್‌ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಅವರಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು 50 ದಿನಗಳ ಬೇಸಿಗೆ ರಜೆ ಅವಧಿಗೆ ‘ಒನ್‌ ಟೈಮ್‌ ವೆಲ್ಫೇರ್‌ ಮೆಷರ್‌’ ಅಡಿಯಲ್ಲಿಅಕ್ಕಿ, ಗೋಧಿ ಒದಗಿಸಲಾಗಿತ್ತು. ಇದಕ್ಕೆ ಪೂರಕವಾಗಿ ಬೇಕಾದ ತೊಗರಿ ಬೇಳೆ, ಉಪ್ಪು, ಅಡಿಗೆ ಎಣ್ಣೆ ಇತ್ಯಾದಿ ವಸ್ತುಗಳ ಖರೀದಿಗಾಗಿ ಈ ಹಣವನ್ನು ಅಡುಗೆ ವೆಚ್ಚ (ಪರಿವರ್ತನಾ ವೆಚ್ಚ)ವಾಗಿ ನೀಡಲಾಗುತ್ತದೆ.

ಲೆಕ್ಕಾಚಾರ ಹೇಗೆ?!
ಪ್ರಸ್ತುತ 1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ಒಟ್ಟು 4.97 ರೂ., ಹಾಗೂ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 7.45 ರೂ. ಕುಕ್ಕಿಂಗ್‌ ಕಾಸ್ಟ್‌ ನಿಗದಿಪಡಿಲಾಗಿದೆ. ಶಾಲೆಯಲ್ಲೂ ಇದೇ ಲೆಕ್ಕಾಚಾರವಿದೆ. ಇದರನ್ವಯ ಎರಡು ವಿಭಾಗದ ವಿದ್ಯಾರ್ಥಿಗಳಿಗೆ ತಲಾ 250 ಮತ್ತು 390 ರೂ. ಸಿಗಲಿದೆ. ಇದು ಒಮ್ಮೆ ಮಾತ್ರ ಸಿಗುವ ಮೊತ್ತವಾಗಿರಲಿದೆ.

ಬ್ಯಾಂಕ್‌ ಖಾತೆ ಸೂಚನೆ
ಬ್ಯಾಂಕ್‌ ಖಾತೆ ಹೊಂದಿರುವ ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು ಸ್ಯಾಟ್ಸ್‌ ತಂತ್ರಾಂಶದಲ್ಲಿಅಳವಡಿಸುವಂತೆ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ. 1ನೇ ತರಗತಿಗೆ ದಾಖಲಾಗುವ ಮಕ್ಕಳ ಹೆಸರಲ್ಲೂರಾಷ್ಟ್ರೀಕೃತ ಬ್ಯಾಂಕ್‌, ಗ್ರಾಮೀಣ ಬ್ಯಾಂಕ್‌ ಹಾಗೂ ಅಂಚೆ ಕಚೇರಿಗಳಲ್ಲಿ’ಶೂನ್ಯ ಬ್ಯಾಂಕ್‌ ಖಾತೆ’ ತೆರೆಯಲು ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತವಿ. ಅನ್ಬು ಕುಮಾರ್‌ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *