ಕಲಬುರಗಿ : ನಿರ್ಮಿತಿ ಕೇಂದ್ರದಲ್ಲಿನ ಅವ್ಯವಹಾರದ ಕುರಿತು ತನಿಖೆ: ಎಂ. ರುದ್ರೇಶ್
ಕಲಬುರಗಿ : ಇಲ್ಲಿಯವರೆಗೆ ಮಹಾಮಾರಿ ಕೋವಿಡ್ ಸೋಂಕಿನ ಭೀತಿಯಿಂದಾಗಿ ನಾನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಐದು ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡು ಯಾವುದೇ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇನ್ನೆರಡು ತಿಂಗಳಲ್ಲಿ ನಿರ್ಮಿತಿ ಕೇಂದ್ರದ ದಿಕ್ಸೂಚಿಯನ್ನೇ ಬದಲಾಯಿಸುತ್ತೇನೆ ಹಾಗೂ ನಿರ್ಮಿತಿ ಕೇಂದ್ರದಲ್ಲಿನ ಅವ್ಯವಹಾರ ಹಾಗೂ ಅಕ್ರಮಗಳ ಕುರಿತು ತನಿಖೆ ಕೈಗೊಳ್ಳುವುದಾಗಿ ನಿಗಮದ ಅಧ್ಯಕ್ಷ ಎಂ. ರುದ್ರೇಶ್ ಅವರು ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಿತಿ ಕೇಂದ್ರದಲ್ಲಿನ ಕಾಮವಾರಿಗಳ ಕುರಿತು ಹಾಗೂ ಕೆಲಸದ ಕುರಿತು ಸಾಕಷ್ಟು ದೂರುಗಳಿವೆ. ಅವುಗಳೆಲ್ಲವನ್ನೂ ನಿವಾರಿಸಿ ನಿರ್ಮಿತಿ ಕೇಂದ್ರದಿಂದ ಉತ್ತಮ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸುವುದಾಗಿ ತಿಳಿಸಿದರು.
ನಿರ್ಮಿತಿ ಸಂಸ್ಥೆಗೆ ಇನ್ನು ಮುಂದೆ ಕಳಂಕ ತರುವಂತಹ ಯಾವುದೇ ಕೆಲಸಗಳು ನಡೆಯುವುದಿಲ್ಲ. ಒಂದು ವೇಳೆ ಕಳಂಕ ಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಹೇಳಿದರು.
ನಿರ್ಮಿತಿ ಕೇಂದ್ರದಿಂದ ಮರಳು ಸಾಗಾಟಕ್ಕೆ ಸರ್ಕಾರವು ಯಾವುದೇ ರೀತಿಯಲ್ಲಿ ಅನುಮತಿ ಕೊಟ್ಟಿಲ್ಲ. ಒಂದು ವೇಳೆ ಆ ಹೆಸರಿನಿಂದ ಮರಳು ಸಾಗಾಟ ಮಾಡುವುದು ಕಂಡುಬಂದಲ್ಲಿ ಅಂಥವರ ಮೇಲೆ ಉಗ್ರ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಮೂರು ಕೋಟಿ ರೂ.ಗಳವರೆಗೆ ನೇರ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಲಾಗಿದೆ. 4ಜಿ ರಿಯಾಯಿತಿ ಬದಲಾಗಿ ಇ4 ಹೊಸ ತಿದ್ದುಪಡಿಯನ್ನು ಸರ್ಕಾರವು ಕೊಟ್ಟಿದೆ ಎಂದು ತಿಳಿಸಿದ ಅವರು, ನಿರ್ಮಿತಿ ಕೇಂದ್ರದಲ್ಲಿ ಈ ಹಿಂದೆ ಆಗಿರುವ ಅವ್ಯವಹಾರ ಹಾಗೂ ಅಕ್ರಮಗಳ ಕುರಿತು ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಳ್ಳಲಾಗುವುದು ಎಂದರು.
ಭ್ರಷ್ಟಾಚಾರದ ಆರೋಪದ ಮೇಲೆ ಈಗಾಗಲೇ ಅಧಿಕಾರಿ ಜಾಫರ್ ಅವರಿಗೆ ಅಮಾನತ್ತು ಮಾಡಲು ಅದೇಶ ನೀಡಲಾಗಿದೆ ಎಂದು ಅವರು ಹೇಳಿದರು.