ಕಲಬುರಗಿ : ಕೋವಿಡ್ ಪರಿಹಾರದಲ್ಲಿ ರಂಗಭೂಮಿ ಕಲಾವಿದರಿಗೆ ಅನ್ಯಾಯ
ಕಲಬುರಗಿ :ಕೋವಿಡ್ ಪರಿಹಾರ ಹಣದ ಹಂಚುವಿಕೆಯಲ್ಲಿ ರಂಗಭೂಮಿ ಕಲಾವಿದರಿಗೆ ಅನ್ಯಾಯ ಆಗುತ್ತಿದೆ ಎಂದು ರಂಗನಿರ್ದೇಶಕ ಹಾಗೂ ಕರ್ನಾಟಕ ನಾಟಕ ಅಕ್ಯಾಡೆಮಿ ಮಾಜಿ ಸದಸ್ಯ ಡಾ. ಸಂದೀಪ್ ಬಿ., ಅವರು ಆರೋಪಿಸಿದ್ದಾರೆ.
ಕೋವಿಡ್-19 ಎರಡನೇ ಅಲೆಯ ಪರಿಸ್ಥಿತಿಯಿಂದಾಗಿ ರಂಗಭೂಮಿ ಕಲಾವಿದರು ಸಾಕಷ್ಟು ಸಮಸ್ಯೆಗೆ ಸಿಲುಕಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ರಂಗಭೂಮಿ ಕಲಾವಿದರ ಸಮಸ್ಯೆಯನ್ನು ಅರಿತ ಕರ್ನಾಟಕ ರಾಜ್ಯ ಸರ್ಕಾರವು ರಂಗಭೂಮಿ ಕಲಾವಿದರಿಗಾಗಿ ಕೋವಿಡ್ ಪರಿಹಾರದ ಹಣ ನೀಡುತ್ತಿರುವುದು ಸ್ವಾಗತಾರ್ಹ. ಆ ಹಣವನ್ನು ಬೆಂಗಳೂರು ಕೇಂದ್ರ ಸ್ಥಾನದಿಂದಲೇ ಹಂಚುತ್ತಿರುವುದು ಮತ್ತು ಹಂಚುವಿಕೆಯಲ್ಲಿ ಸಾಕಷ್ಟು ತಾರತಮ್ಯ ಆಗುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇವರು ವರ ನೀಡಿದರೂ ಪೂಜಾರಿ ನೀಡುತ್ತಿಲ್ಲ ಎಂಬಂತಾಗಿದೆ. ಇದರ ಹಿಂದೆ ರಂಗಭೂಮಿಗೆ ಸಂಬಂಧವಿರದ ಹಿತಾಸಕ್ತಿಗಳು ಕೆಲವು ರಂಗಭೂಮಿಯ ಕಲಾವಿದರನ್ನು ಬಳಸಿಕೊಂಡು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತುರಾಜ್ಯ ಸರ್ಕಾರಕ್ಕೆ ಅಪಖ್ಯಾತಿ ತರುವ ಕೆಲಸದಲ್ಲಿ ತೊಡಗಿದ್ದಾರೆ ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ .ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನಹರಿಸಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ರಂಗಭೂಮಿ ಕಲಾವಿದರಿಗೆ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮೂಲಕವೇ ಪರಿಹಾರ ಧನವನ್ನು ವಿತರಿಸವುದರ ಮೂಲಕ ಕಲಾವಿದರಿಗೆ ಆಗುತ್ತಿರುವ ತಾರತಮ್ಯವನ್ನು ಸರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.