Raghu Dixit: ತೆರೆಮೇಲೆ ಸ್ಟೈಲಿಶ್‌ ಡಾನ್ ಆಗಿ ಮಿಂಚಲಿದ್ದಾರೆ ಗಾಯಕ ರಘು ದೀಕ್ಷಿತ್!

ಹೈಲೈಟ್ಸ್‌:

  • ಸಂಗೀತ ನಿರ್ದೇಶನ, ಗಾಯನದ ಜೊತೆಗೆ ನಟನೆಗೂ ಇಳಿದ ರಘು
  • ಬ್ಯಾಂಗ್ ಸಿನಿಮಾದಲ್ಲಿ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ರಾಕ್ ಸ್ಟಾರ್
  • ಬ್ಯಾಂಗ್ ಸಿನಿಮಾದಲ್ಲಿ ರಘು ಪಾತ್ರ ಹೇಗಿರಲಿದೆ? ಇಲ್ಲಿದೆ ಮಾಹಿತಿ

ರಘು ದೀಕ್ಷಿತ್‌ ಅಂದರೆ ಹಾಡಿನ ಜಲಪಾತ. ಮುಕ್ತ ಮನಸ್ಸಿನಿಂದ ಹಾಡುವ ಮೂಲಕ ನೆರೆದಿರುವ ಸಾವಿರಾರು ಜನರನ್ನೂ ತಮ್ಮ ಅದ್ಭುತ ಗಾಯನದಿಂದ ತನ್ನತ್ತ ಸೆಳೆಯುವಂತಹ ಕೆಲವೇ ಕೆಲವು ಗಾಯಕರಲ್ಲಿ ರಘು ದೀಕ್ಷಿತ್‌ ಸಹ ಒಬ್ಬರು. ದೇಶ-ವಿದೇಶಗಳಲ್ಲಿ ಸಂಗೀತದ ಮೂಲಕ ಮೋಡಿ ಮಾಡಿರುವ ಇವರೀಗ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ಸಿನಿಮಾವೊಂದರಲ್ಲಿ ಸಣ್ಣ ಪಾತ್ರ ಮಾಡಿದ್ದ ರಘು ದೀಕ್ಷಿತ್‌ ಈಗ ‘ಬ್ಯಾಂಗ್‌’ ಎನ್ನುವ ಸಿನಿಮಾದಲ್ಲಿ ಸ್ಟೈಲಿಶ್‌ ಗ್ಯಾಂಗ್‌ಸ್ಟರ್‌ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಸಿನಿಮಾದಲ್ಲಿ ಪ್ರಮುಖ ಪಾತ್ರವಾಗಿರುವುದು ವಿಶೇಷವಾಗಿದೆ. ಈ ಸಿನಿಮಾದಲ್ಲಿ ಶಾನ್ವಿ ಶ್ರೀವಾಸ್ತವ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪಾತ್ರದ ಬಗೆಗೆ ಕೇಳಿದರೆ, ‘ನಾನು ಹಾಡು ಹೇಳಿಕೊಂಡು, ನೃತ್ಯ ಮಾಡಿಕೊಂಡು, ಮ್ಯೂಸಿಕ್‌ ಕಂಪೋಸ್‌ ಮಾಡಿಕೊಂಡು ಆರಾಮಾಗಿದ್ದೆ. ‘ಬ್ಯಾಂಗ್‌’ ಸಿನಿಮಾದ ಮ್ಯೂಸಿಕ್‌ ಡೈರೆಕ್ಟರ್‌ ರಿತ್ವಿಕ್‌ ಮುರಳೀಧರ್‌ ಮತ್ತು ನಿರ್ದೇಶಕ ಶ್ರೀಗಣೇಶ್‌ ಬಂದು ನೀವು ಇಂತಹದ್ದೊಂದು ಪಾತ್ರ ಮಾಡಬೇಕು ಎಂದಾಗ ನಾನು ಅವರಿಗೆ ‘ಸುಮ್ನೆ ತಲೆ ತಿನ್ನಬೇಡಿ, ಎದ್ದು ಹೋಗಿ’ ಎಂದು ಹೇಳಿದ್ದೆ. ಆದರೆ ಅವರು ಬಿಡದೆ ನನ್ನನ್ನು ಒಪ್ಪಿಸಿ ಈ ಪಾತ್ರ ಮಾಡಿಸುತ್ತಿದ್ದಾರೆ. ಇದೊಂದು ಸ್ಟೈಲಿಶ್‌ ಪಾತ್ರ. ಒಳ್ಳೆ ಮನಸ್ಸಿರುವ ಡಾನ್‌ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ನಗುತ್ತಾರೆ ರಘು ದೀಕ್ಷಿತ್‌.

ವಿಶೇಷವೆಂದರೆ ಈ ಗಾಯಕನೀಗ ತೆರೆಯ ಮೇಲೆ ಫೈಟ್‌ ಕೂಡ ಮಾಡಲಿದ್ದಾರೆ! ‘ಈ ಪಾತ್ರದಲ್ಲಿ ಫೈಟ್‌ ಮಾಡಬೇಕು ಎಂದು ಹೇಳಿರುವುದರಿಂದ ಇಂದಿನಿಂದ ಮಾರ್ಷಲ್‌ ಆರ್ಟ್ಸ್‌ ಮತ್ತು ಫೈಟಿಂಗ್‌ ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. ಗಾಯನ, ನೃತ್ಯ, ಸಂಗೀತ ನಿರ್ದೇಶನ, ಈಗ ನಟನೆ… ಇದೊಂದು ರೀತಿಯಲ್ಲಿ ವಿಶೇಷ ಅನುಭವ ನೀಡುತ್ತಿರುವ ಕೆಲಸ. ಕ್ರಿಯೇಟಿವ್‌ ಮನಸ್ಸು ಸುಮ್ಮನೆ ಇರಬಾರದು ಎಂದು ಒಪ್ಪಿಕೊಂಡಿದ್ದೇನೆ. ಜನ ಇಷ್ಟಪಡುವಂತಹ ಪಾತ್ರ ಇದಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು ರಘು.

ನಿರ್ದೇಶನಕ್ಕೆ ರಘು
ಇದರ ನಡುವೆ ರಘು ದೀಕ್ಷಿತ್‌ ನಿರ್ದೇಶಕನಾಗಿ ತಮ್ಮ ಹೊಸ ಅವತಾರಕ್ಕೂ ರೆಡಿಯಾಗಿದ್ದಾರೆ. ಅವರೀಗ ಮೂರು ಕಥೆಗಳನ್ನು ಬರೆದುಕೊಂಡಿದ್ದು, ಅವುಗಳಲ್ಲಿ ಒಂದಕ್ಕೆ ನಿರ್ಮಾಪಕರು ಸಿಕ್ಕಿದ್ದಾರೆ. ಮುಂದಿನ ವರ್ಷ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ಆರಂಭಿಸಲಿದ್ದಾರೆ. ‘ಮೂರು ಕಥೆಗಳನ್ನು ಬರೆದುಕೊಂಡು, ನಿರ್ದೇಶನ ಮಾಡಲು ರೆಡಿಯಾಗಿದ್ದೇನೆ. ಅದಕ್ಕಿಂತಲೂ ಮುನ್ನ ಕೆಲ ನಿರ್ದೇಶಕರ ಜತೆ ಕೆಲಸ ಕಲಿಯುತ್ತಿದ್ದೇನೆ. ಸಂಕಲನಕಾರರ ಬಳಿಯೂ ಹೋಗುತ್ತಿದ್ದೇನೆ. ನಿರ್ದೇಶನ ಮಾಡಿದರೆ ಒಳ್ಳೆಯ ಸಿನಿಮಾವನ್ನೇ ಮಾಡಬೇಕು ಎಂಬುದು ನನ್ನ ಉದ್ದೇಶ. ಅದಕ್ಕಾಗಿ ತಯಾರಿ ಮಾಡಿಕೊಂಡಿದ್ದೇನೆ. ಈ ನಡುವೆ ಎರಡು ಹಿಂದಿ ವೆಬ್‌ ಸಿರೀಸ್‌ಗಳಿಗೆ ಸಂಗೀತ ಸಂಯೋಜನೆಯ ಕೆಲಸ ನಡೆಯುತ್ತಿದೆ. ಸಿನಿಮಾಗಳಿಗೂ ಮ್ಯೂಸಿಕ್‌ ಮಾಡುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು.

ಕೋಟ್‌
‘ಬ್ಯಾಂಗ್‌’ ಸಿನಿಮಾದಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರ. ಅದಕ್ಕಾಗಿ ಕೊಂಚ ದಪ್ಪ ಆಗಿದ್ದೇನೆ. ನಿರ್ದೇಶಕರು ನಾನೇ ಬೇಕು ಎಂದು ಒತ್ತಾಯ ಮಾಡಿದರು. ಯೋಚನೆ ಮಾಡಿ ಒಪ್ಪಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ವಯಸ್ಸಾದ ಮೇಲೆ ಚಿಕ್ಕ ಮಕ್ಕಳಿಗೆ ನಾನು ಇಷ್ಟೆಲ್ಲಾಕೆಲಸಗಳನ್ನು ಮಾಡಿದ್ದೇ ಎಂದು ಹೇಳಬೇಕು.
-ರಘು ದೀಕ್ಷಿತ್‌, ಸಂಗೀತ ನಿರ್ದೇಶಕ

ರಘು ದೀಕ್ಷಿತ್‌ ಅವರು ಈ ಸಿನಿಮಾದಲ್ಲಿ ಸ್ಟೈಲಿಶ್ ಡಾನ್‌ ಪಾತ್ರದಲ್ಲಿರಲಿದ್ದಾರೆ. ಅವರ ಪಾತ್ರ ಪೋಷಣೆ ಮತ್ತು ಸಿನಿಮಾ ಮೇಕಿಂಗ್‌ ಮೆಕ್ಸಿಕನ್‌ ಸ್ಟೈಲ್‌ನಲ್ಲಿರುತ್ತದೆ. ರಘು ದೀಕ್ಷಿತ್‌ ಮತ್ತು ಶಾನ್ವಿ ಶ್ರೀವಾಸ್ತವ ಅವರ ಮಧ್ಯೆ ನಡೆಯುವಂತಹ ಘಟನೆಗಳೇ ಬ್ಯಾಂಗ್‌. ಇದುವರೆಗೂ ನೋಡದೇ ಇರುವ ರೀತಿಯಲ್ಲಿ ರಘು ಅವರು ಕಾಣಿಸಿಕೊಳ್ಳಲಿದ್ದಾರೆ.
-ಶ್ರೀಗಣೇಶ್‌, ನಿರ್ದೇಶಕ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *