ಬಿಜೆಪಿಯಲ್ಲಿ ಗೊಂದಲ ಇಲ್ಲ; ಯಡಿಯೂರಪ್ಪ ನಮ್ಮ ಸರ್ವಸಮ್ಮತ ನಾಯಕ: ಕಟೀಲ್
ಕೋಲಾರ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ವ್ಯಕ್ತವಾಗುತ್ತಿರುವ ಕೂಗನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಳ್ಳಿಹಾಕಿದ್ದಾರೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರೇ ನಮ್ಮ ಸರ್ವ ಸಮ್ಮತ ನಾಯಕ ಎಂದು ಸ್ಪಷ್ಟಪಡಿಸಿದ ಅವರು, ಯಡಿಯೂರಪ್ಪ ನಮ್ಮ ನಾಯಕ ಎಂದು ಎಲ್ಲರು ಒಪ್ಪಿದ್ದೇವೆ. ಸಿಎಂ ಆಗಿ ಯಡಿಯೂರಪ್ಪ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಉತ್ತಮ ಸಾಧನೆ ಮಾಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೋಲಾರದ ಕುಂಬಾರಹಳ್ಳಿ ಹೊರವಲಯದ ರತ್ನ ಕನ್ವೆನ್ಷನಲ್ ಹಾಲ್ ನಲ್ಲಿ ಜಿಲ್ಲಾ ಬಿಜೆಪಿ ಘಟಕ ಆಯೋಜಸಿದ್ದ, ಜಿಲ್ಲಾ ಕಾರ್ಯಕಾರಿಣಿ ಸಭೆಗೆ ನಳಿನ್ ಕುಮಾರ್ ಕಟೀಲ್ ನಿನ್ನೆ ಚಾಲನೆ ನೀಡಿದ ಸಂದರ್ಭದಲ್ಲಿ ಕೈ ಪಾಳಯವನ್ನು ಕುಟುಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸದ ಎಸ್ ಮುನಿಸ್ವಾಮಿ, ಶಾಸಕ ಎಚ್ ನಾಗೇಶ್, ಎಮ್ ಎಲ್ ಸಿ ವೈ ಎ ನಾರಾಯಣಸ್ವಾಮಿ ಸೇರಿದಂಗೆ ಜಿಲ್ಲಾ ಬಿಜೆಪಿ ನಾಯಕರು ಭಾಗಿಯಾಗಿದ್ದರು.
ಕೊರೊನಾದಂತಹ ಈ ಪರಿಸ್ಥಿತಿಯಲ್ಲಿ ದೇಶದಲ್ಲಿ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಹಾಗು ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರೆ ಎಲ್ಲರಿಗೂ ಕೊರೋನಾ ಲಸಿಕೆ ಸಿಗುತ್ತಿರಲಿಲ್ಲ. ಜೊತೆಗೆ ಕೋಟಿ ಕೋಟಿ ಜನ ಸಾಯುತ್ತಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟಿಲ್ ಅವರು, ತಮ್ಮ ಭಾಷಣದ ಉದ್ದಕ್ಕೂ ಕಾಂಗ್ರೆಸ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಕೋವಿಡ್ ನಿಂದ ಕೋಟಿ ಕೋಟಿ ಜನ ಸಾಯ್ತಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಆರೋಗ್ಯ ಕ್ಷೇತ್ರವನ್ನ ಕಡೆಗಣಿಸಿದೆ. ಆಸ್ಪತ್ರೆಯಲ್ಲಿನ ಯಾವುದೇ ವ್ಯವಸ್ಥೆಯನ್ನೂ ಕಾಂಗ್ರೆಸ್ ಸುಧಾರಿಸಿಲ್ಲ. ಇದನ್ನ ಎಲ್ಲರೂ ಪ್ರಶ್ನೆ ಮಾಡಬೇಕಿದೆ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂದು ಲಸಿಕೆ ಟೀಕಿಸಿದ್ದ ಸಿದ್ದರಾಮಯ್ಯ ಇಂದು…?
ಇನ್ನು ಕೊರೊನಾ ಮೊದಲನೇ ಅಲೆ ಸಂದರ್ಭದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಪುರುಷತನ ಹೋಗುತ್ತದೆ ಎಂದು ಪ್ರಚಾರ ಮಾಡಿದ್ದರು. ಎರಡನೇ ಅಲೆಯಲ್ಲಿ ತೀವ್ರತೆ ಹೆಚ್ಚಾದಾಗ ಅಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕದ್ದು ಮುಚ್ಚಿ ಕೊರೋನಾ ಲಸಿಕೆ ಪಡೆದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ವ್ಯಂಗ್ಯವಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಕೊರೊನಾಗೆ ಲಸಿಕೆ ಸಿಗುತ್ತಿರಲಿಲ್ಲ. ಕೊಟ್ಟರೂ ಅವರು ಎಲ್ಲರಿಗೂ ಸಮಾನವಾಗಿ ನೀಡುತ್ತಿರಲಿಲ್ಲ. ಅಲ್ಲೂ ಜಾತಿ ಧರ್ಮ ರಾಜಕೀಯ ಮಾಡುತ್ತಿದ್ದರು ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ವಿರುದ್ದ ವಾಗ್ದಾಳಿ ಮುಂದುವರಿಸಿದ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ನಲ್ಲಿ ಕೋವಿಡ್ ಬಗ್ಗೆ ಚಿಂತೆಯಿಲ್ಲ. ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದೆ. ಆದರೆ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸೀಟ್ ಬಗ್ಗೆ ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾರಿಗೂ ನ್ಯಾಯ ಕೊಡಲಿಲ್ಲ. ಅಹಿಂದ ಹೆಸರಲ್ಲಿ ಸಿಎಂ ಆದ ಸಿದ್ದರಾಮಯ್ಯ ಹಿಂದುಳಿದ ಜನರನ್ನೇ ಮರೆತಿದ್ದರು. ಸಾವಿರಾರು ಹಿಂದುಳಿದ ಜನರ ಹತ್ಯೆಯಾದಾಗ ಹೋಗಿ ನೋಡಿಲ್ಲ. ಸಿದ್ದರಾಮಯ್ಯ ಅವರು ಅಹಿಂದ ಜನರ ಬಗ್ಗೆ ಮಾತಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ. ರಾಜ್ಯ ಯುವ ಕಾಂಗ್ರೆಸ್ಗೂ ಅಧ್ಯಕ್ಷರನ್ನ ನೇಮಿಸಿಲ್ಲ. ಕಾಂಗ್ರೆಸ್ಗೆ ನೀತಿಯಿಲ್ಲ. ಆರೋಗ್ಯದ ವಿಚಾರದಲ್ಲಿ ಹೀನ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಮನೆಯಲ್ಲೀಗ ಬೆಂಕಿ ಬಿದ್ದಿದೆ. ದಲಿತ ಶಾಸಕರಾದ ಆಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬಿದ್ದಿದೆ. ಬೆಂಕಿ ಹಚ್ಚಿದ್ದು ಸಂಪತ್ ರಾಜ್. ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಸಂಪತ್ ರಾಜ್ ಹೇಳುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಅಖಂಡ ಶ್ರೀನಿವಾಸ್ ಅಂತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.