ಜು.26 ಶಾಸಕಾಂಗ ಪಕ್ಷದ ಸಭೆ: ನಾಯಕತ್ವ ಬದಲಾವಣೆ ಚರ್ಚೆಯಾಗಿಲ್ಲ:ಸಿಎಂ
ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಈ ತಿಂಗಳ 26ರಂದು ಎರಡು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ತಿಳಿಸಿದ್ದಾರೆ.
ದೆಹಲಿ ಭೇಟಿ ಕೈಗೊಂಡು ಪ್ತಧಾನಿ, ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ ಬೆಂಗಳೂರಿಗೆ ಹಿಂತಿರುಗಿದ ಬಳಿಕ ಸಿಎಂ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಇಲ್ಲವೆ ಪರ್ಯಾಯ ನಾಯಕತ್ವ ಕುರಿತು ತಮ್ಮ ಜತೆ ವರಿಷ್ಠರು ಚರ್ಚೆ ನಡೆಸಿಲ್ಲ. ತಾವು ಮುಖ್ಯಮಂತ್ರಿ ಯಾಗಿ ಜುಲೈ 26ರಂದು ಎರಡು ವರ್ಷ ಪೂರ್ಣ ಗೊಳ್ಳುತ್ತಿದೆ. ಹೀಗಾಗಿ ಶಾಸಕಾಂಗ ಪಕ್ಚದ ಸಭೆ ಕರೆಯಲಾಗಿದೆ ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬುದು ವರಿಷ್ಠರು ಸೂಚಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೆಲಸ ಮಾಡಿ ಪಕ್ಷ ಸಂಘಟನೆಯ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ದೆಹಲಿ ಭೇಟಿ ಸಫಲವಾಗಿದೆ. ಪ್ರಧಾನಿ ಸೇರಿದಂತೆ ಪಕ್ಷದ ವರಿಷ್ಠರು ಜನಪರ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.