ರೈತ ನಾಯಕ ಜಿ. ಮಾದೇಗೌಡರ ನಿಧನಕ್ಕೆ ಕಂಬನಿ ಮಿಡಿದ ರಾಜಕೀಯ ನಾಯಕರು!

ಹೈಲೈಟ್ಸ್‌:

  • ಜಿ. ಮಾದೇಗೌಡ ಅವರ ನಿಧನಕ್ಕೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರ ಶ್ರದ್ಧಾಂಜಲಿ
  • ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದ ಸಿದ್ದರಾಮಯ್ಯ
  • ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ ಮರುಗಿದ ಎಚ್‌.ಡಿ. ಕುಮಾರಸ್ವಾಮಿ

ಮಂಡ್ಯ: ಜಿಲ್ಲೆಯ ಹಿರಿಯ ರಾಜಕಾರಣಿ ಜಿ. ಮಾದೇಗೌಡರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇಳಿವಯಸ್ಸಿನಲ್ಲೂ ಕಾವೇರಿ ಸೇನೆ ಕಟ್ಟಿ, ಭೀಷ್ಮನಂತೆ ಕಾವೇರಿ ಹೋರಾಟದ ಸಾರಥ್ಯ ವಹಿಸಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದ ಜಿ ಮಾದೇಗೌಡ ಅವರನ್ನು ಕಳೆದುಕೊಂಡ ನಾಡು ಬಡವಾಗಿದೆ. ‘ಕಾವೇರಿ ಪುತ್ರ’ ಎಂದೇ ಹೆಸರಾಗಿದ್ದ ಮಾದೇಗೌಡ ಅವರ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ, ಮಾಜಿ ಸಿಎಂ ಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಸ್‌.ಎಂ. ಕೃಷ್ಣ ಅವರು ಕಂಬನಿ ಮಿಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾದೇಗೌಡರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ರೈತಪರ ಹೋರಾಟಗಾರರು, ಮಾಜಿ ಸಚಿವರು, ಮಾಜಿ ಸಂಸದರಾದ ಶ್ರೀ ಜಿ.ಮಾದೇಗೌಡರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ನಿಧನದಿಂದ ನಾಡು ಹಿರಿಯ ಹೋರಾಟಗಾರರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಅವರ ಕುಟುಂಬವರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಪರೂಪದ ವ್ಯಕ್ತಿಯನ್ನು ಕಳೆದುಕೊಂಡ ನಾಡು ಬಡವಾಗಿದೆ: ಸಿದ್ದರಾಮಯ್ಯ
ಕಾವೇರಿ ಹೋರಾಟಕ್ಕೆ ಬದುಕನ್ನು ಅರ್ಪಿಸಿಕೊಂಡಿದ್ದ ಮಾಜಿ‌ ಸಂಸದ ಜಿ.ಮಾದೇಗೌಡರ ನಿಧನದಿಂದಾಗಿ ಹಳೆ ತಲೆಮಾರಿನ ಅಪರೂಪದ ರಾಜಕೀಯ ಹೋರಾಟಗಾರರೊಬ್ಬರನ್ನು ಕಳೆದುಕೊಂಡು‌ ನಾಡು ಬಡವಾಗಿದೆ.
ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳ‌ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ : ಎಚ್ಡಿಕೆ
ಮುತ್ಸದ್ಧಿ ರಾಜಕಾರಣಿ, ರೈತ ಹೋರಾಟಗಾರ ಜಿ. ಮಾದೇಗೌಡರ ನಿಧನ ಸಂಗತಿ ತೀವ್ರ ನೋವುಂಟುಮಾಡಿದೆ. ಕಾವೇರಿ ರಕ್ಷಣೆ, ರೈತರ ಹಿತಕ್ಕಾಗಿ ಶ್ರಮಿಸಿದ್ದವರು ಮಾದೇಗೌಡರು. ಅವರ ನಿಧನದಿಂದ ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಅವರು ಗುಣವಾಗುವ ವಿಶ್ವಾಸ ಹುಸಿಯಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ.

ನನ್ನ 60ವರ್ಷಗಳ‌ ಒಡನಾಡಿ, ಆತ್ಮೀಯ ಮಿತ್ರ ಜಿ.ಮಾದೇಗೌಡರ ನಿಧನದ ಸುದ್ದಿ ತಿಳಿದು ಅತೀವ ದುಃಖಿತನಾಗಿದ್ದೇನೆ. ನಮ್ಮೆಲ್ಲರ ಪ್ರಾರ್ಥನೆ ಫಲಿಸದೆ ನಮ್ಮನಗಲಿದ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಅಗಲಿಕೆಯಿಂದ ಬಹುದೊಡ್ಡ ಹೋರಾಟದ ಕೊಂಡಿ ಕಳಚಿ ಬಿದ್ದಿದ್ದು, ಮಂಡ್ಯ ಜಿಲ್ಲೆ ತನ್ನ ಗಟ್ಟಿ ಧ್ವನಿಯನ್ನು ಕಳೆದಕೊಂಡಿದೆ.
– ಎಸ್‌.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *