Covid in Sabarimala: ಕೇರಳದಲ್ಲಿ ಕೋವಿಡ್ ನಿಯಮ ಸಡಿಲಿಕೆ, ಶಬರಿಮಲೆಗೆ ಹೋಗಲು ಯಾವೆಲ್ಲಾ ದಾಖಲೆ ಬೇಕು ?

Coronavirus: ಕೊರೊನಾ ಆರ್ಭ ಸಂಪೂರ್ಣವಾಗಿ ನಿಂತಿಲ್ಲ. ಆದ್ರೆ ಕ್ರಮೇಣ ಎರಡನೇ ಅಲೆಯಿಂದ ಎಲ್ಲಾ ರಾಜ್ಯಗಳೂ ಸುಧಾರಿಸಿಕೊಳ್ಳುತ್ತಿವೆ. ನೆರೆಯ ಕೇರಳ ರಾಜ್ಯದಲ್ಲೂ ಸದ್ಯ ಕೋವಿಡ್ ಸಂಖ್ಯೆ ಹತೋಟಿಗೆ ಬಂದಿದೆ. ಹೀಗಾಗಿ ಅಲ್ಲಿಯೂ ಕೆಲ ನಿಯಮಗಳನ್ನು ಸಡಿಲಿಸಿ ಮುಖ್ಯಮಂತ್ರಿ ಪಿನರಾಯಿ ವಿಜಯ್ ಆದೇಶ ಹೊರಡಿಸಿದ್ದಾರೆ. ಇದರಿಂದ ಸಿನಿಮಾ ಶೂಟಿಂಗ್​ಗೆ ಅವಕಾಶ ದೊರೆತಿದ್ದು ಕ್ಷೌರದಂಗಡಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆಗಳು ಕೂಡಾ ಇನ್ನುಮುಂದೆ ತೆರೆದಿರಲಿವೆ. ಈ ಕುರಿತು ಮುಖ್ಯಮಂತ್ರಿಗಳೇ ನಿನ್ನೆ ಪತ್ರಿಕಾಗೋಷ್ಟಿ ಮಾಡಿ ಎಲ್ಲಾ ವಿವರ ನೀಡಿದ್ದಾರೆ. ಜುಲೈ 21ರಂದು ಬಕ್ರಿದ್ ಹಬ್ಬ ಇರೋದ್ರಿಂದ ಬಟ್ಟೆ, ಚಪಪ್ಲಿ, ಗೃಹಬಳಕೆ ವಸ್ತುಗಳು, ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಜುಲೈ 18, 19 ಮತ್ತು 20ರಂದು ಬೆಳಗ್ಗೆ 7ರಿಂದ ರಾತ್ರಿ 8ರವರಗೆ ತೆರೆದಿರಲು ಅವಕಾಶ ನೀಡಲಾಗಿದೆ. ಅದರಲ್ಲೂ ಕೋವಿಡ್ ಸೋಂಕಿನ ಪ್ರಮಾಣ ಒಟ್ಟಾರೆ ಪ್ರದೇಶದಲ್ಲಿ ಶೇಕಡಾ 5ಕ್ಕಿಂತ ಕಡಿಮೆ ಇದ್ದ ಪ್ರದೇಶಗಳಲ್ಲಿ ಮಾತ್ರ ಈ ಸೌಕರ್ಯ ಇರಲಿದೆ. ಉಳಿದೆಡೆ ಕೇವಲ ಜುಲೈ 19ರಂದು ಮಾತ್ರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಧಾರ್ಮಿಕ ಸ್ಥಳಗಳಲ್ಲಿ ಅಂದರೆ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲೂ ಒಮ್ಮೆಗೆ ಕೇವಲ 40 ಜನ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಎಲ್ಲಾ ಕಡೆ ಜನ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಧಾರ್ಮಿಕ ಸ್ಥಳಗಳ ಆಡಳಿತ ಮಂಡಳಿಯದ್ದೇ ಆಗಿರುತ್ತದೆ.

ಇದಲ್ಲದೇ ಶಬರಿಮಲೆಯಲ್ಲಿ ಕರ್ಕಿಡಕ್ಕಂ ವಿಶೇಷ ಸಂದರ್ಭ ಇರುವುದರಿಂದ ಅಲ್ಲಿ ತೆರಳುವ ಭಕ್ತರ ಸಂಖ್ಯೆಯನ್ನು 5,000ದಿಂದ 10,000ಕ್ಕೆ ಏರಿಸಲಾಗಿದೆ. ಇದು ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಂತಸ ತಂದಿದೆ. ಎರಡನೇ ಅಲೆಯ ನಂತರ ಇದೇ ಮೊದಲ ಬಾರಿ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆದಿದ್ದು ಈ ಆಚರಣೆ ಹೆಚ್ಚಿನ ಪ್ರಾಶಸ್ತ್ಯ ಪಡೆದುಕೊಂಡಿದೆ. ಆದರೆ ದೇವಾಲಯಕ್ಕೆ ತೆರಳಲು ಬಯಸುವ ಎಲ್ಲಾ ಭಕ್ತರು ಕಡ್ಡಾಯವಾಗಿ 48 ಗಂಟೆಗಳ ಮುಂಚೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಯಾವುದೇ ಭಕ್ತರು ಈಗಾಗಲೇ ಎರಡೂ ಕೋವಿಡ್ ಲಸಿಕೆ ತೆಗೆದುಕೊಂಡಿದ್ದರೆ ಅಂಥವರಿಗೆ ಮಂದಿರದೊಳಗೆ ಪ್ರವೇಶ ನೀಡಲಾಗುವುದು, ಉಳಿದವರಿಗೆ ಆರ್ಟಿಪಿಸಿಆರ್ ಕಡ್ಡಾಯ. ಲಸಿಕೆ ಪಡೆದವರಿಗೆ ಕೋವಿಡ್ ಲಕ್ಷಣ ಕಂಡುಬಂದರೆ ಅವರೂ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತರಬೇಕಿದೆ. ಆದರೆ ಎಲ್ಲರೂ ಆನ್​ಲೈನ್ ಮೂಲಕ ಬುಕಿಂಗ್ ಮಾಡಿಕೊಂಡೇ ದೇವರ ದರ್ಶನಕ್ಕೆ ಆಗಮಿಸಬೇಕಿದೆ.

ಎರಡು ಡೋಸ್ ಲಸಿಕೆ ಪಡೆದವರಿಗೆ ಓಡಾಟಗಳಿಗೆ ಹೆಚ್ಚಿನ ನಿರ್ಬಂಧ ಇರುವುದಿಲ್ಲ. ಆದರೆ ಅವರು ಕೂಡಾ ಒಂದು ವೇಳೆ ಕೋವಿಡ್ ಲಕ್ಷಣಗಳನ್ನು ಹೊಂದಿದ್ದರೆ ಆಗ ಆರ್ಟಿಪಿಸಿಆರ್ ರಿಪೋರ್ಟ್​ನ್ನು ಕಡ್ಡಾಯವಾಗಿ ತರಬೇಕಿದೆ. ಇನ್ನುಳಿದಂತೆ ಅಂತಾರಾಜ್ಯ ಪರ್ಯಾಣಿಕರು ಈಗ ಆರ್ಟಿಪಿಸಿಆರ್ ರಿಪೋರ್ಟ್ ತರುವ ಅವಶ್ಯಕತೆ ಇಲ್ಲ ಎನ್ನುವುದನ್ನೂ ತಿಳಿಸಲಾಗಿದೆ. ಪರೀಕ್ಷೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಕೂಡಾ ಯಾವುದೇ ನಿಯಮ ವಿಧಿಸಿಲ್ಲ. ಆದರೆ ಹಾಗೆಂದು ಕೋವಿಡ್ ನಿಯಮಗಳನ್ನು ಯಾರೂ ಗಾಳಿಗೆ ತೂರುವಂತಿಲ್ಲ. ಇಷ್ಟೆಲ್ಲಾ ಸಡಿಲಿಕೆ ಇದ್ದರೂ ಕೋವಿಡ್ ನಿಯಮಗಳ ಪಾಲನೆ ಎಲ್ಲಾ ಕಡೆ ಆಗಲೇಬೇಕಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕೇರಳ ರಾಜ್ಯ ಮುಖ್ಯ ಮಂತ್ರಿ ಪಿನರಾಯಿ ವಿಜಯನ್ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *