ಬೀದರ್: 200 ಮಂದಿಗೆ ಆಹಾರಧಾನ್ಯ ಕಿಟ್ ವಿತರಣೆ
ಬೀದರ್: ಜು.20:ಕೋವಿಡ್ ಕಾರಣ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಹಿಂದುಗಡೆಯ ಅರಳು ಸ್ವಯಂ ಸೇವಾ ಸಂಸ್ಥೆಯಲ್ಲಿ 200 ಮಂದಿಗೆ ಆಹಾರಧಾನ್ಯ ಕಿಟ್ ಉಚಿತವಾಗಿ ವಿತರಿಸಲಾಯಿತು.
ಬೀದರ್ ನಗರ, ತಾಲ್ಲೂಕಿನ ಯದಲಾಪುರ, ಅಯಾಸಪುರ, ಕುತ್ತಾಬಾದ್, ಸಾತೋಳಿ, ಮಿರ್ಜಾಪುರ, ನೆಲವಾಡ ಸೇರಿದಂತೆ 19 ಗ್ರಾಮಗಳ ಫಲಾನುಭವಿಗಳಿಗೆ ತಲಾ 5 ಕೆ.ಜಿ ಜೋಳ, 5 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ಹಿಟ್ಟು, 2 ಕೆ.ಜಿ ಬೇಳೆ, 2 ಕೆ.ಜಿ ಸಿಹಿ ಎಣ್ಣೆ, 2 ಕೆ.ಜಿ ರವೆ, 1 ಕೆ.ಜಿ ಉಪ್ಪು ಒಳಗೊಂಡ ಕಿಟ್ ಕೊಡಲಾಯಿತು.
ಬೆಂಗಳೂರಿನ ಕ್ರೈಪ್ಟೊ ಹಾಗೂ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಷನ್ ಪ್ರಾಯೋಜಕತ್ವ ಮತ್ತು ಅರಳು ಹಾಗೂ ವಿದ್ಯಾನಿಕೇತನ ಸಂಸ್ಥೆಗಳ ಸಹಯೋಗದಲ್ಲಿ ಕೋವಿಡ್ನಿಂದ ತೊಂದರೆಗೊಳಗಾದ ಬಡವರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರಿಗೆ ಕಿಟ್ ವಿತರಣೆ ಮಾಡಲಾಗಿದೆ ಎಂದು ಬಾಲ್ಯ ವಿವಾಹ ತಡೆ ಆಂದೋಲನದ ಕಲಬುರ್ಗಿ ವಿಭಾಗೀಯ ಸಂಚಾಲಕ ಡಾ. ಕೆ.ಟಿ. ಮೆರಿಲ್ ಹೇಳಿದರು.
ಕೋವಿಡ್ ಸೋಂಕು ಇಡೀ ಜಗತ್ತನ್ನೇ ಕಾಡುತ್ತಿದೆ. ಸೋಂಕಿನ ಮೊದಲ ಹಾಗೂ ಎರಡನೇ ಅಲೆಗಳು ಸಂಕಷ್ಟಗಳ ಸರಮಾಲೆಗಳನ್ನೇ ಸೃಷ್ಟಿಸಿವೆ. ಇದರಿಂದಾಗಿ ಕೂಲಿ ಕಾರ್ಮಿಕರು, ಬಡವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎನ್ನುವುದೇ ಆಹಾರಧಾನ್ಯ ಕಿಟ್ ವಿತರಣೆಯ ಉದ್ದೇಶವಾಗಿದೆ. ಸೋಂಕಿನ ಮೂರನೇ ಅಲೆ ಬಗ್ಗೆ ಈಗಾಗಲೇ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು. ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ಅರಳು ಸಂಸ್ಥೆಯ ಸಹ ನಿರ್ದೇಶಕಿ ಸುನಿತಾ, ಬೆಂಗಳೂರಿನ ಸೇಂಟ್ ಅಲೊಸಿಯಸ್ ಕಾಲೇಜು ವಿದ್ಯಾರ್ಥಿ ಮಾರ್ಸಿಲೊ ಕಾರ್ಲಸ್, ಯೋಹಾನ್ ಇದ್ದರು