CM BSY: ಸಿಎಂ ಬದಲಾವಣೆ ವದಂತಿ: ಎಂ ಪಿ ರೇಣುಕಾಚಾರ್ಯ ದೆಹಲಿಗೆ ದೌಡು, ಏನು ನಡೆಯುತ್ತಿದೆ ?

ನವದೆಹಲಿ, ಜು. 21: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುತ್ತಾರೆ ಎಂಬ ವದಂತಿ ತೀವ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹೊನ್ನಾಳಿಯ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮಂಗಳವಾರ ರಾತ್ರಿ ದಿಢೀರನೆ ದೆಹಲಿಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸದಂತೆ ನಡೆಯುತ್ತಿರುವ ಒತ್ತಡ ಹೇರುವ ತಂತ್ರದ ಮುಂದುವರಿದ ಭಾಗವಾಗಿ ರೇಣುಕಾಚಾರ್ಯ ಅವರು ದೆಹಲಿಗೆ ಆಗಮಿಸಿದ್ದು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಅವರು ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಆಗುವ ಸಾಧ್ಯತೆ ಇದೆ. ಅಲ್ಲದೆ ಅರುಣ್ ಸಿಂಗ್ ಅವರ ಮೂಲಕ ಇತರೆ ವರಿಷ್ಠರ ಭೇಟಿಗೂ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 

ದೆಹಲಿ ಭೇಟಿ ವೇಳೆ ಯಡಿಯೂರಪ್ಪ ಅವರಿಗೆ ಈಗಾಗಲೇ ಮುಖ್ಯಮಂತ್ರಿ ಸ್ಥಾನ‌‌ ಬಿಟ್ಟು ಕೊಡುವಂತೆ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಯಡಿಯೂರಪ್ಪ ತಮ್ಮ ಸ್ಥಾನ ಉಳಿಸಿಕೊಳ್ಳಲು ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಅವರೇ ರೇಣುಕಾಚಾರ್ಯ ಅವರನ್ನು ದೆಹಲಿಗೆ ಕಳುಹಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ‌ ಹಿಂದೆ ಶಾಸಕರ ತಂಡದೊಂದಿಗೆ ದೆಹಲಿಗೆ ಬರುವುದಾಗಿ ರೇಣುಕಾಚಾರ್ಯ ಹೇಳಿದ್ದರು. ಆದರೆ ಈಗ ದಿಢೀರನೇ ಒಬ್ಬರೇ ದೆಹಲಿಗೆ ಆಗಮಿಸಿದ್ದಾರೆ. ಆದುದರಿಂದ ಯಡಿಯೂರಪ್ಪ ಆಪ್ತ ವಲಯದ ಇತರೆ ಶಾಸಕರು ದೆಹಲಿಗೆ ಬರಲು ನಿರಾಕರಿಸಿದರಾ? ಯಡಿಯೂರಪ್ಪ ಬಲ ಕ್ಷೀಣಿಸುತ್ತಿದೆಯಾ ಎಂಬ ಅನುಮಾನಗಳು ಕೂಡ ಕಂಡುಬರುತ್ತಿವೆ.
ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕೆಂದು ಮಠಾಧೀಶರು ಒತ್ತಡ ಹೇರುವುದನ್ನು ಮುಂದುವರೆಸಿದ್ದಾರೆ. ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರು ಕೂಡ ಯಡಿಯೂರಪ್ಪ ಪರ ವಕಲಾತ್ತು ವಹಿಸುತ್ತಿದ್ದಾರೆ. ಇಂದು ಬೆಳಿಗ್ಗೆಯೇ ಯಾದಗಿರಿ ಮತ್ತು ಗುಲಬರ್ಗಾ ಜಿಲ್ಲೆಗಳಿಂದ ಬಂದಿದ್ದ ಸ್ವಾಮೀಜಿಗಳು ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ.‌ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಲಿಂಗಾಯತ ನಾಯಕ ರೇವಣ್ಣ ಸಿದ್ದಯ್ಯ ಕೂಡ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *