Holiday Plan: ದಾಂಡೇಲಿಯಲ್ಲಿ ಸಾಹಸ ಕ್ರೀಡೆಗಳು ಮತ್ತೆ ಶುರು, ರಿವರ್ ರಾಫ್ಟಿಂಗ್ ಹೋಗೋಕೆ ಇದೇ ಬೆಸ್ಟ್ ಟೈಮ್ !

ಕಾರವಾರ: ದಾಂಡೇಲಿ- ಜೊಯಿಡಾ ತಾಲೂಕಿನ ಪ್ರವಾಸೋದ್ಯಮದ ಕ್ಷಿಪ್ರ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿರುವ ಹಾಗೂ ಪ್ರವಾಸಿಗರ ಅತ್ಯಾಕರ್ಷಣೆಯ ಕೇಂದ್ರಬಿಂದುವಾಗಿರುವ ರ‍್ಯಾಫ್ಟಿಂಗ್ ಮತ್ತು ಜಲಕ್ರೀಡೆಗೆ ಭಾನುವಾರದಿಂದ ಷರತ್ತುಬದ್ಧ ಅನುಮತಿಯನ್ನು ಉತ್ತರ ಕನ್ನಡ ಜಿಲ್ಲಾಡಳಿತ ನೀಡಿದೆ. ಕೊರೋನಾ ಕಡಿಮೆಯಾಗಿ, ಅನ್‌ಲಾಕ್ ಆರಂಭವಾಗುತ್ತಿದ್ದಂತೆಯೆ, ವ್ಯಾಪಾರ- ವಹಿವಾಟುಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಅನುಮತಿ ನೀಡಿರುವುದರ ಜೊತೆಯಲ್ಲಿ ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಅನುಮತಿಯನ್ನು ನೀಡಲಾಗಿತ್ತು. ಆದರೆ ದಾಂಡೇಲಿ- ಜೊಯಿಡಾ ತಾಲೂಕಿನ ಪ್ರವಾಸೋದ್ಯಮಕ್ಕೆ ಮೂಲ ಆಸರೆಯಾದ ರ‍್ಯಾಫ್ಟಿಂಗಿಗೆ ಹಾಗೂ ಜಲಕ್ರೀಡೆಗೆ ಅನುಮತಿ ನೀಡಲಾಗಿರಲಿಲ್ಲ.  ಈಗ ಆರ್ಥಿಕತೆಗೆ ವೇಗ ನೀಡಲು ಜಲಕ್ರೀಡೆಗೆ ಅವಕಾಶ ನೀಡಲಾಗಿದೆ.

ಪ್ರವಾಸೋದ್ಯಮಕ್ಕೆ ಅನುಮತಿ ಇದ್ರು ರಾಫ್ಟಿಂಗ್​ಗೆ ಅವಕಾಶ ಇರಲಿಲ್ಲ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಇರುವ ಹೋಂ ಸ್ಟೇ, ರೆಸಾರ್ಟ್ ಗಳು ತೆರೆದುಕೊಂಡಿದ್ದರೂ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿತ್ತು.  ಕೊರೋನಾ ಲಾಕ್‌ಡೌನ್‌ನಿಂದ ತೀವ್ರ ಹೈರಾಣಗೊಂಡಿದ್ದ ಹೋಂ ಸ್ಟೇ, ರೆಸಾರ್ಟ್ ಮಾಲಕರು, ಕಾರ್ಮಿಕರು ಹಾಗೂ ಪ್ರವಾಸೋದ್ಯಮವನ್ನೆ ನಂಬಿಕೊಂಡು ಕಾಯಕ ನಡೆಸುತ್ತಿದ್ದವರನ್ನು ರ‍್ಯಾಫ್ಟಿಂಗ್ ಹಾಗೂ ಜಲಕ್ರೀಡೆಗೆ ಅನುಮತಿ ನೀಡದಿರುವುದು ಮತ್ತಷ್ಟು ಆತಂಕಕ್ಕೆ ತಳ್ಳಿತ್ತು. ರ‍್ಯಾಫ್ಟಿಂಗನ್ನೆ ನೆಚ್ಚಿಕೊಂಡು ಬರುತ್ತಿದ್ದ ಪ್ರವಾಸಿಗರಿಗೆ ರ‍್ಯಾಫ್ಟಿಂಗ್, ಜಲಕ್ರೀಡೆಗೆ ಅವಕಾಶವಿಲ್ಲ ಅಂದ್ಮೇಲೆ ಅವರಾದರೂ ಇಷ್ಟಪಟ್ಟು ಬರಲು ಸಾಧ್ಯವೆ ಎಂಬ ಅಳಲು ಪ್ರವಾಸೋದ್ಯಮಿಗಳದ್ದಾಗಿತ್ತು.ಇದೀಗ ರ‍್ಯಾಫ್ಟಿಂಗಿಗೆ ಅವಕಾಶವನ್ನು ನೀಡಲಾಗಿದೆ.

ಜು.17ರಂದು ಉಪವಿಭಾಗಾಧಿಕಾರಿ ವಿಧ್ಯಶ್ರೀ ಚಂದರಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ರ‍್ಯಾಫ್ಟಿಂಗ್ ಮತ್ತು ಜಲಕ್ರೀಡೆಗೆ ಶರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ. ಶರತ್ತುಗಳನ್ನು ಪಾಲಿಸಿಕೊಂಡು ಭಾನುವಾರದಿಂದ ಜಲಕ್ರೀಡೆ ಆರಂಭವಾಗಿದೆ. ಪರಿಣಾಮವಾಗಿ ಜಿಡ್ಡುಕಟ್ಟಿದ ಪ್ರವಾಸೋದ್ಯಮ ಮತ್ತೆ ಚಿಗುರೊಡೆಯತೊಡಗಿದೆ. ಪ್ರವಾಸೋದ್ಯಮಿಗಳು ಮತ್ತು ಪ್ರವಾಸಿಗರಲ್ಲಿ ಇದೀಗ ಸಂತಸ ಮನೆ ಮಾಡಿದೆ. ಕೋವಿಡ್ ಮುನ್ನೆಚ್ಚರಿಕೆ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕಾದ ಗುರುತರ ಜವಾಬ್ದಾರಿ ಪ್ರವಾಸೋದ್ಯಮಿಗಳದ್ದು, ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ತೊಡಗಿಕೊಂಡವರದ್ದು ಹಾಗೂ ಪ್ರವಾಸಿಗರದ್ದಾಗಿದೆ.

ಜಲಕ್ರೀಡೆ ನಡೆಸಲು ಶರತ್ತುಗಳು: ರ‍್ಯಾಫ್ಟಿಂಗ್, ಜಲಕ್ರೀಡೆ ಮಾಡುವ ಸಂಸ್ಥೆಗಳು, ಮಾಲಕರುಗಳು ಹೋಂ ಸ್ಟೇ, ರೆಸಾರ್ಟ್ ಹಾಗೂ ಜಲಕ್ರೀಡೆಗೆ ಬರುವ ಪ್ರವಾಸಿಗರ ಮಾಹಿತಿಯನ್ನು ಪ್ರತಿದಿನ ಸಂಬಂಧಿಸಿದ ಗ್ರಾಮ ಪಂಚಾಯತಿಗೆ ನೀಡಬೇಕು. ಪ್ರವಾಸಿಗರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕಡ್ಡಾಯಗೊಳಿಸುವುದು. ಕೋವಿಡ್- 19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹೋಂ ಸ್ಟೇ, ರೆಸಾರ್ಟ್ ಹಾಗೂ ಜಲಕ್ರೀಡೆಗೆ ಬರುವ ಪ್ರವಾಸಿಗರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಜಲಕ್ರೀಡೆಗಳಲ್ಲಿ 8 ಜನರಿಗಿಂತ ಹೆಚ್ಚಿಗೆಯಿಲ್ಲದಂತೆ ನೋಡಿಕೊಳ್ಳುವುದು ಮತ್ತು ಜನಸಂದಣಿಯಾಗದಂತೆ ನೋಡಿಕೊಳ್ಳುವುದು ಹೀಗೆ ಶರತ್ತುಬದ್ಧ ಅನುಮತಿಯನ್ನು ನೀಡಲಾಗಿ, ಸಂಬಂಧಪಟ್ಟ ಹೋಂ ಸ್ಟೇ, ರೆಸಾರ್ಟ್, ಹಾಗೂ ಜಲಕ್ರೀಡೆಯನ್ನು ನಿರ್ವಹಿಸುವ ಸಂಸ್ಥೆಗಳು ಮುಚ್ಚಳಿಕೆ ನೀಡುವಂತೆ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *