ಕಲಬುರಗಿ : ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಆಹಾರಧಾನ್ಯ ಹಂಚಿಕೆಗೆ ಚಾಲನೆ

ಕಲಬುರಗಿ : ಲಾಕ್ ಡೌನ್ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಅಂತ್ಯೋದಯ ಮತ್ತು ಆದ್ಯತಾ ಕುಟುಂಬಗಳಿಗೆ ಉಚಿತ ಪಡಿತರ ನೀಡುವ ಕಾರ್ಯಕ್ರಮಕ್ಕೆ ಸಂಸದ ಡಾ.ಉಮೇಶ ಜಾಧವ ಅವರು ಚಾಲನೆ ನೀಡಿದರು.

ಬುಧವಾರ ಕಲಬುರಗಿ ನಗರದ ಉದನೂರ ರಸ್ತೆಯ ಮಾಕಾ ಲೇಔಟ್ ನಲ್ಲಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ 133 ರಲ್ಲಿ ಆಯ್ದ 10 ಎ.ಎ.ವೈ ಮತ್ತು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಸಾಂಕೇತಿಕವಾಗಿ ಉಚಿತ ಆಹಾರಧಾನ್ಯಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ.ಉಮೇಶ ಜಾಧವ ಅವರು ಕೋವಿಡ್ ಎರಡನೇ ಅಲೆ ಕಾರಣ ಬಡವರು ಮತ್ತು ಶ್ರಮಿಕ ವರ್ಗದ ಕೈಗಳಿಗೆ ಕೆಲಸವಿರಲಿಲ್ಲ. ಈ ವರ್ಗಕ್ಕೆ ಆಹಾರ ಸಮಸ್ಯೆಯಾಗಬಾರದೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಮೇ ತಿಂಗಳಿನಿಂದ ಬರುವ ನವೆಂಬರ್ ಮಾಹೆ ವರೆಗೆ ಒಟ್ಟು 7 ತಿಂಗಳ ಕಾಲ ಎ.ಎ.ವೈ ಮತ್ತು ಬಿ.ಪಿ.ಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಉಚಿತವಾಗಿ ಹಾಗೂ ಆದ್ಯತೇತರ ಪಡಿತರ ಚೀಟಿಗೆ ರಿಯಾಯಿತಿ ದರದಲ್ಲಿ ಪಡಿತರ ವಿತರಿಸಲಾಗುತ್ತಿದ್ದು, ಅರ್ಹರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಈ ಉದ್ದೇಶಕ್ಕಾಗಿ ಜುಲೈ-2021 ಮಾಹೆಗೆ ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಜಿಲ್ಲೆಗೆ 8953 ಮೆಟ್ರಿಕ್ ಟನ್ ಅಕ್ಕಿ ಹಂಚಿಕೆಯಾಗಿದೆ. ಎನ್.ಎಫ್.ಎಸ್.ಎ ಮತ್ತು ಪಿ.ಎಂ.ಜಿ.ಕೆ.ಎ.ವೈ ಯೋಜನೆಯಡಿ ಒಟ್ಟಾರೆ ಜಿಲ್ಲೆಯ 63812 ಅಂತ್ಯೋದಯ ಪಡಿತರ ಚೀಟಿಯ 266421ಸದಸ್ಯರು ಮತ್ತು 488047 ಆದ್ಯತಾ ಪಡಿತರ ಚೀಟಿಯ 1655052 ಸದಸ್ಯರು ಹಾಗೂ 18346 ಆದ್ಯತೇತರ ಪಡಿತರ ಚೀಟಿಯ ಸದಸ್ಯರು ಇದರ ಫಲಾನುಭವಿಗಳಾಗಿದ್ದಾರೆ ಎಂದರು.

ಕಳೆದ‌ ವರ್ಷ‌ ಲಾಕ್ ಡೌನ್‌ನಲ್ಲಿಯೂ 8 ತಿಂಗಳ ಉಚಿತ ಆಹಾರಧಾನ್ಯ‌ ನೀಡುವ ಮೂಲಕ ಕೇಂದ್ರ ಸರ್ಕಾರ‌ ಬಡವರ ನೆರವಿಗೆ ಧಾವಿಸಿತ್ತು ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದರು.

ಈ ಸಂದರ್ಭದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಗುಣಕಿ, ಸಹಾಯಕ ನಿರ್ದೇಶಕ ರವಿ ಭೈರೇ ಸೇರಿದಂತೆ ಸ್ಥಳೀಯ ಆಹಾರ ನಿರೀಕ್ಷಕರು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *