Karnataka Flood – ಮುಖ್ಯಮಂತ್ರಿಯಿಂದ ಪ್ರವಾಹ ಪರಿಸ್ಥಿತಿ ಪರಿಶೀಲನೆ; ಬೆಂಗಳೂರಲ್ಲಿ ಸಿಟಿ ರೌಂಡ್ಸ್

ಬೆಂಗಳೂರು (ಜುಲೈ 23): ರಾಜ್ಯದ ಹಲವೆಡೆ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಜನರನ್ನ ಕಂಗೆಡಿಸಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಂತೂ ಪ್ರವಾಹದ ರುದ್ರ ನರ್ತನ ಆಗತ್ತಿದೆ. ಜಲಾಶಯಗಳು ತುಂಬಿಹೋಗಿ ಹೊರಹರಿವು ಹೆಚ್ಚಾಗುತ್ತಿದೆ. ತತ್​ ಪರಿಣಾಮವಾಗಿ ಕೃಷ್ಣಾ ನದಿ ಉಕ್ಕೇರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಬೆಳಗಾವಿ ಜಿಲ್ಲೆಯ ಅನೇಕ ಭಾಗಗಳು ಈಗಾಗಲೇ ನೀರಿನಲ್ಲಿ ಮುಳುಗಡಿ ಆಗಿವೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳನ್ನ ದೂರವಾಣಿ ಮೂಲಕವೇ ಸಂಪರ್ಕಿಸಿದ ಸಿಎಂ ಯಡಿಯೂರಪ್ಪ, ಅಲ್ಲಿನ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ನದಿಪಾತ್ರದ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಮುಖ್ಯಮಂತ್ರಿ, ಸರ್ಕಾರದಿಂದ ಹೆಚ್ಚಿನ ನೆರವು ಬೇಕಾದಲ್ಲಿ ಕೂಡಲೇ ಕರೆ ಮಾಡುವಂತೆ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿರುವ ತಮ್ಮ ಕಾವೇರಿ ನಿವಾಸದಿಂದಲೇ ಬೆಳಗಾವಿ ಸೇರಿದಂತೆ ಪ್ರವಾಹ ಅಪಾಯದಲ್ಲಿರುವ ವಿವಿಧ ಜಿಲ್ಲೆಗಳ ಡಿಸಿಗಳನ್ನ ಸಂಪರ್ಕಿಸಿ ಪರಿಸ್ಥಿತಿ ಅವಲೋಕಿಸಿದರು. ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ನೆರವುಗಳನ್ನ ಒದಗಿಸುವುದಾಗಿ ಅವರು ಆ ಎಲ್ಲಾ ಜಿಲ್ಲಾಧಿಕಾರಿಗಳ ಭರವಸೆ ನೀಡಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆಲವಾರು ದಿನಗಳಿಂದ ಭರ್ಜರಿ ಮಳೆಯಾಗಿದೆ. ಅದರಲ್ಲೂ ಮುಂಬೈ ಕರ್ನಾಟಕ ಹಾಗೂ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅನೇಕ ಕಡೆ ಮನೆಗಳ ಕುಸಿತವಾದ ದುರ್ಘಟನೆಗಳು ನಡೆದಿವೆ. ಸಿಡಿಲಿನ ಹೊಡೆತಕ್ಕೆ ಹಲವು ಮೃತಪಟ್ಟಿದ್ಧಾರೆ. ರಾಜಧಾನಿ ಬೆಂಗಳೂರಿನಲ್ಲೂ ಮಳೆಯ ಆರ್ಭಟ ಇದೆ. ಬೆಳಗಾವಿಯಲ್ಲಿ ಇನ್ನೂ 2-3 ದಿನಗಳ ಕಾಲ ಮಹಾಮಳೆ ಮುಂದವರಿಯಲಿದೆ ಎಂದು ಹವಾಮಾನ ಅಧಿಕಾರಿಗಳು ಎಚ್ಚರಿಸಿದ್ದು, ಕುಂದಾನಗರಿಯ ಜನರಲ್ಲಿ ಭೀತಿ ಹೆಚ್ಚಿಸಿದೆ.

ಸಿಟಿ ರೌಂಡ್ಸ್:

ಇದೇ ವೇಳೆ, ನಾಯಕತ್ವ ಬದಲಾವಣೆ ವಿಚಾರದ ತಲೆಬಿಸಿಯಲ್ಲಿರುವ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಸಿಟಿ ರೌಂಡ್ಸ್ ನಡೆಸಿದ್ದಾರೆ. ಸ್ಮಾರ್ಟ್ ಸಿಟಿ ರಸ್ತೆಗಳು, ಟೆಂಡರ್ ಶೂರ್, ವೈಟ್ ಟಾಪಿಂಗ್ ರಸ್ತೆಗಳ ಕಾಮಗಾರಿಗಳನ್ನ ಅವರು ವೀಕ್ಷಿಸುತ್ತಿದ್ದಾರೆ. ಹಾಗೆಯೇ, ವಿವಿಧೆಡೆ ಜಂಕ್ಷನ್ ಅಭಿವೃದ್ಧಿ, ರಾಜಕಾಲುವೆ ವಾಟರ್ ವೇವ್ ಯೋಜನೆಗಳ ವೀಕ್ಷಣೆ ಮಾಡಿದ್ದಾರೆ. ಆನಂದ್ ರಾವ್ ಸರ್ಕಲ್​ನಿಂದ ಪ್ರಾರಂಭವಾದ ಅವರ ಸಿಟಿ ರೌಂಡ್ಸ್ ಗಾಂಧಿ ನಗರ, ಧನ್ವಂತರಿ ರಸ್ತೆ, ಮೆಜೆಸ್ಟಿಕ್, ನಾಯಂಡಹಳ್ಳಿ ಜಂಕ್ಷನ್, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಮೈಸೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್, ತುಮಕೂರು ರಸ್ತೆ, ಸಿ ವಿ ರಾಮನ್ ನಗರ ರಸ್ತೆ, ಮೇಖ್ರಿ ಸರ್ಕಲ್, ಹೈ ಗ್ರೌಂಡ್ ಪ್ರದೇಶ, ಕಮರ್ಶಿಯಲ್ ಸ್ಟ್ರೀಟ್, ಇಂದಿರಾನಗರ, ಬ್ರಿಗೇಡ್ ರಸ್ತೆ, ರಿಚ್ಮಂಡ್ ಸರ್ಕಲ್, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಅವರು ಅಭಿವೃದ್ಧಿ ಕಾಮಗಾರಿಗಳನ್ನ ವೀಕ್ಷಿಸಲಿದ್ದಾರೆ. ಅಂತಿಮವಾಗಿ ಅವರು ಕಸ್ತೂರಬಾ ರಸ್ತೆ, ಮಾಣಿಕ್ ಶಾ ಸ್ಕ್ವಯರ್, ಪೊಲೀಸ್ ಕಮಿಷನರ್ ರಸ್ತೆ, ರಾಜಭವನ ರಸ್ತೆ ಮೂಲಕ ತಮ್ಮ ಗೃಹ ಕಚೇರಿ ಕೃಷ್ಣಾಗೆ ವಾಪಸ್ಸಾಗಲಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *