ಬೆಳಗಾವಿಯಲ್ಲಿ ವರುಣನ ಆರ್ಭಟ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್
ಹೈಲೈಟ್ಸ್:
- ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆರಾಯನ ಅಬ್ಬರ
- ಮಳೆ ಹಿನ್ನೆಲೆ ಪುಣೆ-ಬೆಂಗಳೂರು ಹೆದ್ದಾರಿ ಬಂದ್
- ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನರಿಗೆ ಸಂಕಷ್ಟ
ಬೆಳಗಾವಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದ ಕೊಂಕಣ ಪ್ರದೇಶದ ಮಳೆಯಾರ್ಭಟಕ್ಕೆ ಗಡಿ ಜಿಲ್ಲೆ ಅಕ್ಷರಶಃ ನಲುಗುತ್ತಿದೆ. ಬೆಳಗಾವಿ ನಗರ ಸೇರಿ ಎಲ್ಲೆಡೆ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರ, ಪಟ್ಟಣಗಳ ತಗ್ಗು ಪ್ರದೇಶದ ಜನರು, ನದಿ ತೀರದ ನಿವಾಸಿಗಳು ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ.
ಮಹಾ ಮಳೆಗೆ ದೂಧಗಂಗಾ, ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ವೇದಗಂಗಾ ನದಿಗೆ ಪ್ರವಾಹ ಬಂದ ಪರಿಣಾಮ ನಿಪ್ಪಾಣಿ ಬಳಿಯ ಯಮಗರ್ಣಿ ಸೇತುವೆ ಮೇಲೆ ನೀರು ಹರಿದು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗುತ್ತಿದೆ.
ಕೃಷ್ಣಾ ನದಿ ನೀರಿನ ಮಟ್ಟ ವಿಪರೀತ ಏರಿಕೆ ಕಂಡಿದ್ದು, ನದಿ ತೀರದ ಜನ ಭಯಭೀತರಾಗಿದ್ದಾರೆ. ಹಿರಣ್ಯಕೇಶಿ ನದಿ ಪ್ರವಾಹಕ್ಕೆ ಹುಕ್ಕೇರಿ ತಾಲೂಕು ಸಂಕೇಶ್ವರ ಪಟ್ಟಣದ ಮಠಗಲ್ಲಿಯ ಮನೆಗಳಿಗೆ ನೀರು ನುಗ್ಗಿ, ರಾತ್ರಿ ಅಲ್ಲಿನ ಜನರನ್ನು ಸ್ಥಳಾಂತರಿಸಲಾಗಿದೆ. ನಿರಂತರ ಮಳೆಗೆ ಬೆಳಗಾವಿ ನಗರವೂ ತತ್ತರಿಸಿದೆ. ತಗ್ಗು ಪ್ರದೇಶವಾದ ಶಿವಾಜಿನಗರ, ಶಾಸ್ತ್ರಿ ನಗರ ಮೊದಲಾದೆಡೆ ಮನೆಗಳು ಜಲಾವೃತವಾಗಿವೆ. ಖಾನಾಪುರ ತಾಲೂಕಿನಲ್ಲಿ ಅತಿ ಹೆಚ್ಚು ವರ್ಷಧಾರೆಯಾಗುತ್ತಿದ್ದು, ನದಿ ಹಳ್ಳ ಕೊಳ್ಳಗಳು ತುಂಬಿ ಹರಿದು, ನೂರಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.