Karnataka Politics: ಶ್ರೀರಾಮುಲು ಡಿಸಿಎಂ ಆಗ್ತಾರಾ? ಹೀಗೊಂದು ಬಿಸಿ-ಬಿಸಿ ಚರ್ಚೆ ಕಮಲ ಪಾಳಯದಲ್ಲಿ..!
ಚಿತ್ರದುರ್ಗ(ಜು.23): ಸಿಎಂ ಬದಲಾವಣೆ ಚರ್ಚೆ ವಿಷಯ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಕೂಡಾ ಜೋರಾಗಿಯೇ ಕುತೂಹಲ ಕೆರಳಿಸಿದೆ. ಇದರ ಬೆನ್ನಲ್ಲೇ ಚಿತ್ರದುರ್ಗ ಜಿಲ್ಲೆಯಲ್ಲಿ ಸಚಿವರು ಯಾರಾಗಬಹುದು? ಪಕ್ಷಕ್ಕಾಗಿ ದುಡಿದ ಸಚಿವ ಬಿ.ಶ್ರೀರಾಮುಲು ಡಿಸಿಎಂ ಆಗ್ತಾರೆ ಅನ್ನೋ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇದರ ನಡವೆ ಸಚಿವ ಶ್ರೀರಾಮುಲು ಬೆಂಬಲಿಗರು, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ BOSS DCM ಎಂದು ಶ್ರೀರಾಮುಲು ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಬದಲಾವಣೆ ಚರ್ಚೆ ನಡೆಯುತ್ತಲೇ ಇದೆ. ಇದಕ್ಕೆ ಸರಿಯಾಗಿ ವಿರೋಧ ಪಕ್ಷದ ನಾಯಕರೂ ಸೇರಿದಂತೆ, ಬಿಎಸ್ವೈ ಮೇಲೆ ಮುನಿಸಿಕೊಂಡಿದ್ದ ಬಸನ ಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೀಶ್ವರ್ ಸೇರಿದಂತೆ ಹಲವರು ಸಿಎಂ ಬದಲಾವಣೆ ಮುನ್ಸೂಚನೆ ಕುರಿತು ಹೇಳಿಕೆಗಳನ್ನ ನೀಡುತ್ತಲೇ ಬಂದಿದ್ದರು. ಅವರ ಹೇಳಿಕೆಗಳಿಗೆ ಪುಷ್ಠಿ ನೀಡುವಂತೆ ಇದೀಗ ಮುಖ್ಯ ಮಂತ್ರಿ ಬಿಎಸ್ವೈ ಅವರನ್ನ ಬದಲಾವಣೆ ಮಾಡಿಯೇ ಮಾಡುತ್ತಾರೆ. ಅದಕ್ಕೆ ಸರಿಯಾಗಿ ಮತ್ತೊಬ್ಬ ಸಿಎಂ ಯಾರು ಅನ್ನೋ ಆಯ್ಕೆ ಒಳಗೊಳಗೆ ನಡೆಯುತ್ತಿದೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ ಲಿಂಗಾಯತ ಮಠಾಧೀಶರು ಸೇರಿ ಹಿಂದುಳಿದ, ದಲಿತ ಮಠಾಧೀಶರು ಸಿಎಂ ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದ್ರೆ ಪಕ್ಷಕ್ಕೆ ತೊಂದರೆ ಆಗುತ್ತದೆ ಎಂಬ ಸಂದೇಶ ನೀಡಿ, ಬಿಎಸ್ವೈ ಗೆ ಬೆಂಬಲ ನೀಡಿದ್ದರು. ಅದರಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶ್ರೀಗಳು, ಕೂಡಾ ಬಿಎಸ್ವೈ ಪರ ಬ್ಯಾಟಿಂಗ್ ಮಾಡಿ ಸಿಎಂ ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ರು.
ಆದರೆ ಸಿಎಂ ಬದಲಾವಣೆ ತಡೆಗೆ ಪ್ರಯತ್ನಿಸಿದ ಯತ್ನ ವಿಫಲವಾದಂತೆ ಕಂಡುಬರುತ್ತಿದೆ. ಯಾಕಂದ್ರೆ ಸಿಎಂ ಬದಲಾವಣೆ ವಿಷಯದಲ್ಲಿ ಮೌನ ಮುರಿದಿರುವ ಬಿಎಸ್ವೈ, ಹೈಕಮಾಂಡ್ ತೀರ್ಮಾನಕ್ಕೆ ಬದ್ದವಾಗಿ ಮುಂದೆ ಪಕ್ಷ ಸಂಘಟಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದು ಪರೋಕ್ಷವಾಗಿ ಸಿಎಂ ರಾಜೀನಾಮೆ ಕೊಡಲು ಸಿದ್ದ ಅನ್ನೋ ಮುನ್ಸೂಚನೆ ನೀಡಿದಂತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರು ಮುರುಘಾ ಶ್ರೀಗಳು, ಸಿಎಂ ಸ್ಥಾನಕ್ಕೆ ಬಿಎಸ್ ವೈ ರಾಜೀನಾಮೆ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಯಡಯೂರಪ್ಪನವರು, ಯಾವುದೇ ನಿರ್ಣಯ ತೆಗೆದುಕೊಳ್ಳಲು ಸ್ವತಂತ್ರರಾಗಿದ್ದಾರೆ. ನಾವು ಯಾವುದೇ ಒತ್ತಡ ಹಾಕುವುದಿಲ್ಲ. ಒತ್ತಡ ಹಾಕಲೂ ಬಾರದು, ಎಂದಿದ್ದು, ಮುಂದಿನ ಸಿಎಂ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಲು ಮುರುಘಾಶ್ರೀ ನಕಾರ ತೋರಿದ್ದಾರೆ.
ಇನ್ನೂ ಬಿಎಸ್ ವೈ ಬೆಂಬಲಿಸಿದ ಶ್ರೀಗಳ ಬಗ್ಗೆ ವಿಶ್ವನಾಥ್ ಟೀಕೆಗೆ ತಿರುಗೇಟು ನೀಡಿರುವ ಶ್ರೀಗಳು, ಒಳ್ಳೆಯ ಕೆಲಸ ಮಾಡುವವರು ಕೆಟ್ಟ ಮಾತು ಕೇಳಲು ಸಿದ್ಧರಿರಬೇಕು, ಬಸವಣ್ಣನವರು ಬೈದವರೆನ್ನ ಬಂಧುಗಳು ಎಂದಿದ್ದಾರೆ. ಬಸವಣ್ಣನ ತತ್ವದಡಿಯಲ್ಲಿ ನಾವುಗಳು ಹೋಗಬೇಕಿದೆ ಎಂದು ಟಾಂಗ್ ನೀಡಿದ್ದಾರೆ.ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಸದ್ದು ಮಾಡ್ತಿದ್ದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಸಚಿವ ಶ್ರೀರಾಮುಲು ಡಿಸಿಎಂ ಆಗ್ತಾರೆ, ಅನ್ನೋ ಕುತುಹಲಕಾರಿ ಚರ್ಚೆ ಶುರುವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನ ಸಂಘಟಿಸಿ, ಪಕ್ಷಕ್ಕೆ ಓಟ್ ಬ್ಯಾಂಕ್ ತಂದುಕೊಳ್ಳೋಕೆ ಶ್ರೀರಾಮುಲು ಅವರನ್ನ ಡಿಸಿಎಂ ಮಾಡುತ್ತೇವೆ ಎಂಬ ಮಾತು ಹೇಳಿದ ಬಿಜೆಪಿ ರಾಜ್ಯ ನಾಯಕರು ಪ್ರಚಾರ ಕೈಗೊಂಡಿದ್ದರು. ಅದರಂತೆ ಮಧ್ಯ ಕರ್ನಾಟಕ ಭಾಗದಲ್ಲಿ ಇಡೀ ವಾಲ್ಮೀಕಿ ಸಮುದಾಯ ರಾಮುಲು ಡಿಸಿಎಂ ಆಗುತ್ತಾರೆ ಅನ್ನೋ ಮಹದಾಸೆ ಹೊತ್ತು ಬಿಜೆಪಿಗೆ ಸಾಲಿಡ್ ಓಟ್ ಹಾಕಿ ಬೆಂಬಲ ನೀಡಿದ್ರು.
ಆದರೆ ಬಿಜೆಪಿ ಸರ್ಕಾರ ಬಂದು ಎರಡು ವರ್ಷಗಳು ಕಳೆದರೂ ಸಚಿವ ಬಿ.ಶ್ರೀರಾಮುಲುಗೆ ಡಿಸಿಎಂ ಪಟ್ಟ ನೀಡದೇ ಕೇವಲ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತೆ ಮಾಡಿತ್ತು. ಇದರಿಂದ ಸಚಿವ ಶ್ರೀರಾಮುಲು, ಸೇರಿದಂತೆ ವಾಲ್ಮೀಕಿ ಸಮುದಾಯ ಬೇಸರಗೊಂಡಿತ್ತು. ಅದು ಬಿಜೆಪಿ ಹೈಕಮಾಮಾಂಡ್ ತಲುಪಿತೋ ಏನೋ ಇದೀಗ ವಾಲ್ಮೀಕಿ ಸಮುದಾಯವನ್ನ ಸೆಳೆಯೋಕೆ ಸಚಿವ ಬಿ.ಶ್ರೀರಾಮುಲುರನ್ನ ಡಿಸಿಎಂ ಮಾಡೋ ಪ್ಲಾನ್ ಮಾಡಿದೆ. ಅದಕ್ಕೆ ಸಾಕ್ಷಿ ಎಂಬಂತೆ ರಾಜ್ಯದಲ್ಲಿ ಸಿಎಂ ಚರ್ಚೆ ಬಿಸಿ ಇರುವಾಗಲೇ ಕಮಲ ಪಾಳಯದ ಹೈಕಮಾಂಡ್ ನಾಯಕರು, ರಾಮುಲುಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ ಅನ್ನೊದು ಕುತೂಹಲ ಮೂಡಿಸಿದೆ.