Morning Digest: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​, ಈ ವರ್ಷ ದುಬೈನಲ್ಲಿ ನೀಟ್ ಪರೀಕ್ಷೆ; ಇಂದಿನ ಪ್ರಮುಖ ಸುದ್ದಿಗಳಿವು

1.NEET UG 2021 Exam: ಈ ವರ್ಷ ದುಬೈನಲ್ಲಿ ನಡೆಯಲಿದೆ ನೀಟ್ ಪರೀಕ್ಷೆ

ನವದೆಹಲಿ(ಜು.23): ಇದೇ ಮೊದಲ ಬಾರಿಗೆ NEET-UG ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಈ ಬಾರಿ ದುಬೈನಲ್ಲಿ ಆಯೋಜಿಸಲಾಗುತ್ತಿದ್ದು, ಗುರುವಾರ ಶಿಕ್ಷಣ ಸಚಿವಾಲಯ ಈ ವಿಷಯವನ್ನು ಖಚಿತಪಡಿಸಿದೆ. ಅದರಂತೆ ಈ ವರ್ಷ NEET-UG 2021 ಪರೀಕ್ಷೆ ಕುವೈತ್​​ನಲ್ಲಿ ನಡೆಯಲಿದೆ. ನೀಟ್​ 2021 ಪರೀಕ್ಷೆ ಸೆಪ್ಟೆಂಬರ್​ 12ರಂದು ನಡೆಯಲಿದೆ. ಈ ಮೊದಲು ಆಗಸ್ಟ್​​ 1ಕ್ಕೆ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಬಳಿಕ ಸೆಪ್ಟೆಂಬರ್​ 12ಕ್ಕೆ ಮುಂದೂಡಲಾಯಿತು. ಅರಬ್ ಸಂಯುಕ್ತ ಸಂಸ್ಥಾನ (UAE) ಆಗಸ್ಟ್​ 2ರವರೆಗೆ ಭಾರತದ ಎಲ್ಲಾ ವಿಮಾನಗಳಿಗೆ ನಿರ್ಬಂಧ ಹೇರಿದೆ.

NEET 2021 ಪರೀಕ್ಷೆಯನ್ನು ಒಟ್ಟು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಹಿಂದಿ, ಪಂಜಾಬಿ, ಅಸ್ಸಾಮಿ, ಬೆಂಗಾಳಿ, ಒಡಿಯಾ, ಗುಜರಾತಿ, ಮರಾಠಿ, ತೆಲುಗು, ಮಲೆಯಾಳಂ, ಕನ್ನಡ, ತಮಿಳು, ಉರ್ದು ಮತ್ತು ಇಂಗ್ಲಿಷ್​ ಭಾಷೆಗಲ್ಲಿ ನೀಟ್​ ಪರೀಕ್ಷೆ ನಡೆಯಲಿದೆ. ಇವುಗಳಲ್ಲಿ ಪಂಜಾಬಿ ಮತ್ತು ಮಲೆಯಾಳಂ ಭಾಷೆಗಳನ್ನು ಇತ್ತೀಚೆಗೆ ಸೇರ್ಪಡೆ ಮಾಡಲಾಯಿತು.

2.Karnataka Weather Today: ರಾಜ್ಯದಲ್ಲಿ ಹೆಚ್ಚಾದ ಮಳೆಯ ಆರ್ಭಟ; ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್​ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಧಿಕ ಮಳೆಯಾಗುತ್ತಿದೆ. ಇಂದು ಕೂಡ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲೂ ಇಂದು ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂದು ಅಂದರೆ ಜು. 23ರಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಲ್ಲಿ ರೆಡ್​​​ ಅಲರ್ಟ್​​ ಘೋಷಣೆ ಮಾಡಲಾಗಿದೆ. ಅದೇ ರೀತಿ ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಇನ್ನು, ಬೀದರ್, ಗದಗ, ಹಾವೇರಿ, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ಇಂದು ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್​ ಕೊಡಲಾಗಿದೆ. ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

3.Karnataka Rains: ರಾಜ್ಯದಲ್ಲಿ ಮಳೆಗೆ ಉಕ್ಕಿ ಹರಿಯುತ್ತಿರುವ ನದಿಗಳು, ಎದುರಾದ ಪ್ರವಾಹ ಭೀತಿ

ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ನಿನ್ನೆ ಯಲ್ಲಾಪುರದ ಅರೆಬೈಲ್ ಬಳಿ ಗುಡ್ಡ ಕುಸಿತವಾಗಿತ್ತು. ಹೀಗಾಗಿ ಅಂಕೋಲಾ-ಹುಬ್ಬಳ್ಳಿ ರಾ. ಹೆದ್ದಾರಿ 63 ಬಂದ್ ಆಗಿತ್ತು. ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಕುಸಿತವಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕಲ್ಲತ್ತಿಗಿರಿ ಜಲಪಾತ ಉಕ್ಕಿ ಹರಿಯುತ್ತಿದೆ. ಕೆಮ್ಮಣ್ಣುಗುಂಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಕಲ್ಲತ್ತಿಗಿರಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಕಲ್ಲತ್ತಿಗಿರಿ ಜಲಪಾತದ ಸೌಂದರ್ಯಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ನಿನ್ನೆ ರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳಸ, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಸೇತುವೆ ಮುಳುಗಡೆಯಿಂದಾಗಿ ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ. ಮೊನ್ನೆ ರಾತ್ರಿಯಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಮಲೆನಾಡಿನ ಜನರು ತತ್ತರಿಸಿ ಹೋಗಿದ್ದಾರೆ. ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.4.Petrol Price- ಮೇ 4ರಿಂದ ಪೆಟ್ರೋಲ್ ದರದಲ್ಲಿ 11 ರೂ ಹೆಚ್ಚಳ; ಇವತ್ತಿನ ಪೆಟ್ರೋಲ್ ಡೀಸೆಲ್ ಬೆಲೆ ಇಲ್ಲಿದೆ

ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ ಆರು ದಿನಗಳಿಂದ ತಟಸ್ಥವಾಗಿದೆ. ಜುಲೈ 17ರಿಂದ ಪೆಟ್ರೋಲ್ ಬೆಲೆ ಯಾವುದೇ ಏರಿಕೆ ಕಂಡಿಲ್ಲ.ಆದರೆ, ಮೇ 4ರಿಂದ ಇಲ್ಲಿಯವರೆಗೆ ಹಲವು ಬಾರಿ ಬೆಲೆ ಹೆಚ್ಚಳಗೊಂಡ ಪರಿಣಾಮ ಈ ಅವಧಿಯಲ್ಲಿ ಪೆಟ್ರೋಲ್ 11 ರೂ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.25 ರೂ ದರ ಇದೆ. ಡೀಸೆಲ್ ಬೆಲೆ 95.26 ರೂ ನಲ್ಲೇ ಮುಂದುವರಿದಿದೆ. ಮಹಾನಗರಿಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಡೀಸೆಲ್ ಅತಿ ದುಬಾರಿ ಇದೆ. ಈ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ 107.83 ಇದ್ದರೆ, ಡೀಸೆಲ್ ದರ 97.43 ರೂ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.84 ರೂ ಇದೆ. ಇಲ್ಲಿ ಡೀಸೆಲ್ ಬೆಲೆ ಇನ್ನೂ 90 ರೂ ಗಡಿ ಮುಟ್ಟಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರ ಈ ವರ್ಷ ಗಣನೀಯ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪೆಟ್ರೋಲ್ ಈ ವರ್ಷ ಬರೋಬ್ಬರಿ 63 ಬಾರಿ ಬೆಲೆ ಏರಿಕೆ ಕಂಡಿದೆ. ಇದು ಜನವರಿ 1ರಿಂದ ಜುಲೈ 9ರವರೆಗೆ ಸರ್ಕಾರವೇ ನೀಡಿರುವ ಲೆಕ್ಕ. ಈ ಬೆಲೆ ಏರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 3.34 ಲಕ್ಷ ಕೋಟಿ ರೂ ಆದಾಯ ಹರಿದುಬಂದಿದೆ. ಇನ್ನು, ಇದೇ ಅವಧಿಯಲ್ಲಿ ಡೀಸೆಲ್ ಬೆಲೆ 61 ಬಾರಿ ಹೆಚ್ಚಳಗೊಂಡಿದೆ. ಇನ್ನು, ಬೆಲೆ ಇಳಿಕೆ ವಿಷಯಕ್ಕೆ ಬಂದರೆ ಈ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಕಂಡಿದ್ದು ಕೇವಲ ನಾಲ್ಕು ಬಾರಿ ಮಾತ್ರ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *