ಜು. 25ರಂದು ಪತ್ರಿಕಾ ದಿನಾಚರಣೆ: ಪ್ರಶಸ್ತಿ ಪ್ರದಾನ
ನಗರದ ಪತ್ರಿಕಾ ಭವನದಲ್ಲಿ ಜುಲೈ 25ರಂದು ಬೆಳಿಗ್ಗೆ 10-30ಕ್ಕೆ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಅವರು ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ವನಮಹೋತ್ಸವ ಕಾರ್ಯಕ್ರಮ ಸಹ ಆಯೋಜಿಸಲಾಗಿದೆ ಎಂದರು.
ಉದ್ಘಾಟನೆಯನ್ನು ಸಂಸದ ಡಾ. ಉಮೇಶ್ ಜಾಧವ್ ಅವರು ನೆರವೇರಿಸುವರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರ್, ಶಾಸಕರಾದ ಶ್ರೀಮತಿ ಕನೀಜ್ ಫಾತಿಮಾ, ಬಸವರಾಜ್ ಮತ್ತಿಮೂಡ್, ಬಿ.ಜಿ. ಪಾಟೀಲ್ ಅವರು ಆಗಮಿಸುವರು ಎಂದು ಅವರು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ್, ಕಾರ್ಯದರ್ಶಿ ಸಂಜೀವಕುಮಾರ್ ಕುಲಕರ್ಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ದೇವೆಂದ್ರಪ್ಪ ಕಪನೂರ್ ಅವರು ಆಗಮಿಸುವರು ಎಂದು ಅವರು ತಿಳಿಸಿದರು.
ಈ ಬಾರಿಯ ವ್ಹಿ.ಎನ್. ಕಾಗಲಕರ್ ಪ್ರಶಸ್ತಿಯನ್ನು ಪತ್ರಕರ್ತರಾದ ರಾಮಕೃಷ್ಣ ಬಡಶೇಷಿ, ಬಾಬುರಾವ್ ಯಡ್ರಾಮಿ ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 5000ರೂ.ಗಳ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಅದೇ ರೀತಿ ಉತ್ತಮ ಸಂಪಾದಕ ಪ್ರಶಸ್ತಿಯನ್ನು ಬೌದ್ಧಪ್ರಿಯ ನಾಗಸೇನ್, ವಿದ್ಯುನ್ಮಾನ ಉತ್ತಮ ವರದಿಗಾರ ಪ್ರಶಸ್ತಿಗೆ ರಾಜಶೇಖರ್ ಹೊಕ್ರಾಣಿಮಠ್, ಗ್ರಾಮೀಣ ಉತ್ತಮ ವರದಿಗಾರ ಪ್ರಶಸ್ತಿಗೆ ಅವಿನಾಶ್ ಬೋರಂಚಿ ಸೇಡಂ, ಶಿವರಾಜ್ ವಾಲಿ ಚಿಂಚೋಳಿ, ಉತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಶಿವಶರಣ್ ಬೆನ್ನೂರ್, ಉತ್ತಮ ಕ್ಯಾಮೆರಾಮೆನ್ ಪ್ರಶಸ್ತಿಗೆ ಗಂಗಾಧರ್ ಹಿರೇಮಠ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 1100ರೂ.ಗಳು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಅದೇ ರೀತಿ ಪತ್ರಿಕಾ ಕಚೇರಿಗಳ ಮುದ್ರಣ, ಜಾಹೀರಾತು ಪ್ರಸಾರ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿಗಳಿಗೂ ಸಹ ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಶಾಮಕುಮಾರ್ ಸಿಂಧೆ, ಗುರುಬಸಪ್ಪ ಸಜ್ಜನಶೆಟ್ಟಿ, ದೇವೆಂದ್ರಪ್ಪ ಅವಂಟಿ, ರಮೇಶ್ ಖಮಿತಕರ್, ರಾಜು ದೇಶಮುಖ್, ಹಣಮಂತರಾವ್ ಭೈರಾಮಡಗಿ ಮುಂತಾದವರು ಉಪಸ್ಥಿತರಿದ್ದರು.