ಕಲಬುರಗಿ : ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಸತ್ಯನಾರಾಯಣ್ ನೇಮಕ
ಕಲಬುರಗಿ : ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬುಟ್ಟಾ ಸತ್ಯನಾರಾಯಣ್ ಅವರು ನೇಮಕಗೊಂಡಿದ್ದಾರೆ.
ಈ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಕಾತಿ ಆದೇಶ ಹೊರಡಿಸಿದ್ದಾರೆ. ಗುರುವಾರದಂದೇ ನೇಮಕಾತಿಯಾಗಿದ್ದು, ಬರುವ ಸೋಮವಾರದಂದು ನೂತನ ಕುಲಪತಿಗಳು ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರೊ. ಎಚ್.ಎಂ. ಮಹೇಶ್ವರಯ್ಯ ಅವರ ಅವಧಿ ಪೂರ್ಣಗೊಂಡಿದ್ದರಿಂದ ಪ್ರೊ. ಎಂ.ವಿ. ಅಳಗವಾಡಿಯವರು ಹಂಗಾಮಿ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಸತ್ಯನಾರಾಯಣ್ ಅವರ ನೇಮಕಾತಿಯಾಗಿದ್ದು, ಪೂರ್ಣಾವಧಿ ನೇಮಕವಾದಂತಾಗಿದೆ.
ನೂತನ ಕುಲಪತಿ ಸತ್ಯನಾರಾಯಣ್ ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪರಿಸರ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಸುಮಾರು 31 ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ. ಐವರು ವಿದ್ಯಾರ್ಥಿಗಳು ಪಿಎಚ್ಡಿ ಪದವಿಯನ್ನು ಇವರ ಮಾರ್ಗದರ್ಶನದಲ್ಲಿ ಪಡೆದಿದ್ದಾರೆ.