ಕರ್ನಾಟಕ ಅನ್‌ಲಾಕ್: ಧಾರ್ಮಿಕ ಕೇಂದ್ರಗಳು, ಮನರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ

ಹೈಲೈಟ್ಸ್‌:

  • ಪ್ರಾರ್ಥನಾ ಸ್ಥಳಗಳನ್ನು ತೆರೆಯಲು ಅನುಮತಿ ನೀಡಿದ ರಾಜ್ಯ ಸರಕಾರ
  • ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲ ರೀತಿಯ ಪ್ರಾರ್ಥನಾ ಚಟುವಟಿಕೆಗಳಿಗೆ ಅವಕಾಶ
  • ಜಾತ್ರೆ, ಉತ್ಸವ, ಮೆರವಣಿಗೆಗಳ ಮೇಲಿನ ನಿರ್ಬಂಧ ಮುಂದುವರಿಕೆ
  • ಮನರಂಜನಾ ಪಾರ್ಕ್‌ಗಳಲ್ಲಿ ಜಲಕ್ರೀಡೆಗಳಿಗೆ ಅವಕಾಶವಿಲ್ಲ

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾದ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ಭಕ್ತರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.

ಪ್ರಾರ್ಥನಾ ಸ್ಥಳಗಳಾದ ದೇವಸ್ಥಾನ, ಮಸೀದಿ, ಗುರುದ್ವಾರ ಹಾಗೂ ಇತರೆ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಪೂಜೆ ಹಾಗೂ ಪ್ರಾರ್ಥನೆ ಚಟುವಟಿಕೆಗಳಿಗೆ ಅವಕಾಶ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಆದೇಶವು ಭಾನುವಾರದಿಂದ (ಜುಲೈ 25) ಜಾರಿಗೆ ಬರಲಿದೆ. ಧಾರ್ಮಿಕ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ಕೋವಿಡ್ 19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿಯೂ ಪೂಜಾ ವಿಧಿವಿಧಾನ ಪಾಲಿಸಲು ಅನುಮತಿ ಕೊಡಲಾಗಿದೆ. ಆದರೆ ಜಾತ್ರೆಗಳು, ದೇವಾಲಯ ಉತ್ಸವಗಳು, ಮೆರವಣಿಗೆಗಳು ಮತ್ತು ಜನಸಮೂಹ ಸೇರುವಿಕೆ ಮೇಲಿನ ನಿರ್ಬಂಧ ಮುಂದುವರಿಯಲಿದೆ.

ಅಲ್ಲದೆ, ಮನರಂಜನಾ ಪಾರ್ಕ್‌ಗಳು ಹಾಗೂ ಅದೇ ರೀತಿಯ ಸ್ಥಳಗಳನ್ನು ಮತ್ತೆ ಆರಂಭಿಸಲು ಅವಕಾಶ ಕೊಡಲಾಗಿದೆ. ಇಲ್ಲಿ ಕೂಡ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ. ಮನರಂಜನಾ ಪಾರ್ಕ್‌ಗಳನ್ನು ತೆರೆದಿದ್ದರೂ, ಅಲ್ಲಿ ಮುಖ್ಯವಾಗಿ ನಡೆಯುವ ಜಲ ಕ್ರೀಡೆ ಅಥವಾ ನೀರಿಗೆ ಸಂಬಂಧಿಸಿದ ಸಾಹಸ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *