ದೇಶದ ಅತಿ ದೊಡ್ಡ ಬಂದೂಕು ಪರವಾನಗಿ ಹಗರಣ: 22 ಸ್ಥಳಗಳಲ್ಲಿ ಸಿಬಿಐ ದಾಳಿ

ಹೈಲೈಟ್ಸ್‌:

  • ದೇಶದಲ್ಲಿಯೇ ಅತಿ ದೊಡ್ಡ ಬಂದೂಕು ಪರವಾನಗಿ ಹಗರಣ
  • ಹಿರಿಯ ಐಎಎಸ್ ಅಧಿಕಾರಿ ಶಾಹಿದ್ ಚೌಧುರಿ ಮನೆಯಲ್ಲಿ ಶೋಧ
  • 2012ರಿಂದ ಎರಡು ಲಕ್ಷಕ್ಕೂ ಅಧಿಕ ಅಕ್ರಮ ಪರವಾನಗಿ ವಿತರಣೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ 22 ಸ್ಥಳಗಳಲ್ಲಿ ಸಿಬಿಐ ಶನಿವಾರ ಬೆಳಿಗ್ಗೆ ದಾಳಿಗಳನ್ನು ನಡೆಸಿದೆ.

ಬಂದೂಕು ಪರವಾನಗಿಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ಐಎಎಸ್ ಅಧಿಕಾರಿ ಶಾಹಿದ್ ಇಕ್ಬಾಲ್ ಚೌಧುರಿ ಅವರ ನಿವಾಸದ ಮೇಲೆಯೂ ದಾಳಿ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಕಾರ್ಯದರ್ಶಿ (ಬುಡಕಟ್ಟು ವ್ಯವಹಾರ) ಮತ್ತು ಯುವಜನ ಯೋಜನೆ ಸಿಇಒ ಆಗಿರುವ ಚೌಧುರಿ ಅವರು ಕಥುವಾ, ರಿಯಾಸಿ, ರಜೌರಿ ಮತ್ತು ಉಧಾಂಪುರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಅವರು ಇತರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜನರಿಗೆ ನಕಲಿ ಹೆಸರಿನಲ್ಲಿ ಸಾವಿರಾರು ಬಂದೂಕು ಪರವಾನಗಿಗಳನ್ನು ವಿತರಿಸಿದ್ದರು ಎಂದು ಆರೋಪಿಸಲಾಗಿದೆ.

ಕನಿಷ್ಠ ಎಂಟು ಮಂದಿ ಮಾಜಿ ಉಪ ಆಯುಕ್ತರನ್ನು ಕೇಂದ್ರ ತನಿಖಾ ಸಂಸ್ಥೆ ವಿಚಾರಣೆಗೆ ಒಳಪಡಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2012ರಿಂದ ಎರಡು ಲಕ್ಷಕ್ಕೂ ಅಧಿಕ ಬಂದೂಕು ಪರವಾನಗಿಗಳನ್ನು ಅಕ್ರಮವಾಗಿ ವಿತರಿಸಲಾಗಿದೆ. ಇದು ಭಾರತದ ಅತಿ ದೊಡ್ಡ ಬಂದೂಕು ಪರವಾನಗಿ ಜಾಲ ಎಂದು ಹೇಳಲಾಗಿದೆ.

ಕಳೆದ ವರ್ಷ ಐಎಎಸ್ ಅಧಿಕಾರಿ ರಾಜೀವ್ ರಂಜನ್ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು. ಕುಪ್ವಾರಾ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರಂಜನ್ ಮತ್ತು ಇತ್ರತ್ ಹುಸೇನ್ ರಫೀಕಿ ಅವರು ಅಂತಹ ಅನೇಕ ಪರವಾನಗಿ ವಿತರಿಸಿದ್ದರು.

ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳವು 2017ರಲ್ಲಿ ಈ ಹಗರಣವನ್ನು ಮೊದಲು ಬಯಲಿಗೆಳೆದಿತ್ತು. ಗನ್ ಡೀಲರ್‌ಗಳಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ರಂಜನ್ ಅವರ ಸಹೋದರ ಮತ್ತು ಇತರರನ್ನು ಅದು ಬಂಧಿಸಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *