ವಾಡಿ ಎಆರ್​ಟಿ ಕೇಂದ್ರ ಮುಚ್ಚಲು ಮುಂದಾದ ACC ನಿರ್ಧಾರಕ್ಕೆ ಸ್ಥಳೀಯರ ಆಕ್ರೋಶ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ಎಆರ್​ಟಿ ಕೇಂದ್ರವನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂದು ಎಸಿಸಿ ಕಂಪನಿಯ ಆಡಳಿತ ಮಂಡಳಿ ತಿಳಿಸಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

 

ಕಲಬುರಗಿ: ಕಳೆದ 14 ವರ್ಷಗಳಿಂದ ಹೆಚ್‍ಐವಿ ಸೋಂಕಿತರ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿರುವ ಎಆರ್​ಟಿ ಕೇಂದ್ರವನ್ನು ಶಾಶ್ವತವಾಗಿ ಮುಚ್ಚಲು ಎಸಿಸಿ ಸಿಮೆಂಟ್ ಕಂಪನಿಯ ಆಡಳಿತ ಮಂಡಳಿ ಮುಂದಾಗಿದೆ ಎನ್ನಲಾಗ್ತಿದೆ. ಕಂಪನಿಯ ಈ ನಿರ್ಧಾರಕ್ಕೆ ಸ್ಥಳೀಯರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ಎಆರ್​ಟಿ ಕೇಂದ್ರವನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂದು ಎಸಿಸಿ ಕಂಪನಿಯ ಆಡಳಿತ ಮಂಡಳಿ ನಿರ್ಧಾಕ್ಷಿಣ್ಯವಾಗಿ ಹೇಳಿದೆ. ಇದೇ ಸೆ.31 ಈ ಆಸ್ಪತ್ರೆಯ ಆರೋಗ್ಯ ಸೇವೆಗೆ ಬ್ರೇಕ್ ಬಿಳಲಿದ್ದು, ಹಾಗಾದರೆ ಮುಂದೇನು ಗತಿ ಎಂಬ ಆತಂಕ ಹೆಚ್‍ಐವಿ ಸೋಂಕಿತರಲ್ಲಿ ಮನೆಮಾಡಿದೆ. ಪ್ರತಿ ತಿಂಗಳು ಸೋಂಕಿನ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯುತ್ತಿದ್ದ 900 ಕ್ಕೂ ಹೆಚ್ಚು ಹೆಚ್‍ಐವಿ ಸೋಂಕಿತರು ಎಸಿಸಿ ಆಡಳಿತದ ಈ ತೀರ್ಮಾನದಿಂದ ಅತಂತ್ರರಾಗಿದ್ದಾರೆ.

 

ಲೈಂಗಿಕ ಕಾರ್ಯಕರ್ತೆಯರು ಹಾಗೂ ಲಾರಿ ಚಾಲಕರು ನೂರಾರು ಸಂಖ್ಯೆಯಲ್ಲಿರುವ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ 70 ಜನ, ಸುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ 200 ಜನ ಸೇರಿದಂತೆ ಯಾದಗಿರಿ, ಕಲಬುರಗಿ, ಜೇವರ್ಗಿ, ಬೀದರ್​, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 900 ಮಂದಿ ಹೆಚ್‍ಐವಿ ಸೋಂಕಿತರು ಸ್ಥಳೀಯ ಎಆರ್​ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಪ್ರತಿ ತಿಂಗಳು ಆಸ್ಪತ್ರೆಗೆ ಬರುತ್ತಾರೆ. ಹೆಚ್‍ಐವಿ ವೈರಸ್ ಪ್ರಮಾಣ, ದೇಹದ ರೋಗ ನಿರೋಧಕತೆ, ತೂಕ, ಟಿಬಿ ಸೇರಿದಂತೆ ಇತರೆ ಪರೀಕ್ಷೆಗಳನ್ನು ಮಾಡಿಸಿಕೊಂಡು ಮಾತ್ರೆಗಳನ್ನು ಪಡೆಯುತ್ತಾರೆ. ಈ ಕೇಂದ್ರದಲ್ಲಿ ಒಬ್ಬ ವೈದ್ಯಾಧಿಕಾರಿ ಸೇರಿದಂತೆ ಏಳು ಜನ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಎಸಿಸಿಯ ದಿಢೀರ್ ನಿರ್ಧಾರದಿಂದ ಸೋಂಕಿತರಿಗೆ ಬರಸಿಡಿಲು ಬಡಿದಂತಾಗಿದೆ.

ಎಸಿಸಿ ಆಡಳಿತ ಮಂಡಳಿ ಪ್ರತಿಕ್ರಿಯೆ:

ಎಸಿಸಿ ಕಂಪನಿ ಅಧೀನದಲ್ಲಿ ನಡೆಯುತ್ತಿರುವ ಎಆರ್​ಟಿ ಸೆಂಟರ್ ಅನ್ನು ಸೆ.31 ರಂದು ಮುಚ್ಚುಲಾಗುವುದು ಎಂದು ಎಸಿಸಿ ಕಂಪನಿ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ವಾಡಿ ಎಆರ್​ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಬೇರೆ ಎಆರ್​ಟಿ ಕೇಂದ್ರಗಳಿಗೆ ವರ್ಗಾಯಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆದೇಶ ಬಂದಿದೆ. ಡಿ.1 ರಿಂದ ಆಸ್ಪತ್ರೆ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಿದೆ. 14 ವರ್ಷಗಳ ಕಾಲ ಎಆರ್​ಟಿ ಕೇಂದ್ರದಿಂದ ಆರೋಗ್ಯ ಸೇವೆ ನೀಡಿದ್ದೇವೆ. ಇದಕ್ಕಾಗಿ ಪ್ರತಿ ವರ್ಷ 20 ಲಕ್ಷ ರೂ. ಖರ್ಚು ಮಾಡಿದ್ದೇವೆ. ಸದ್ಯ ವಾಡಿ ವಲಯದಲ್ಲಿ ರೋಗಿಗಳ ಸಂಖ್ಯೆ ಕ್ಷೀಣಿಸಿದೆ. ಹೀಗಾಗಿ ಈ ಸೌಲಭ್ಯ ಹಿಂಪಡೆದು ಪರ್ಯಾಯವಾಗಿ ಸಾರ್ವಜನಿಕ ಆರೋಗ್ಯ ಕೇಂದ್ರ ಅಥವಾ ಈ ಭಾಗದ ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ತೆರೆಯಲು ಚಿಂತನೆ ನಡೆದಿದೆ ಎಂದು ಎಸಿಸಿ ಸಿಎಸ್‍ಆರ್ ವಿಭಾಗ ಮುಖ್ಯ ವ್ಯವಸ್ಥಾಪಕ ಪೆದ್ದಣ್ಣ ಬೀದಳ ತಿಳಿಸಿದ್ದಾರೆ.

ಸೌಲಭ್ಯ ಕೊಟ್ಟು ಕಸಿದುಕೊಳ್ಳುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ:

ಸುಮಾರು 14 ವರ್ಷಗಳ ಕಾಲ ಹೆಚ್‍ಐವಿ ಸೋಂಕಿತರ ಆರೋಗ್ಯ ಸೇವೆ ಮಾಡಿರುವ ಎಸಿಸಿ ಕಂಪನಿ ಈಗ ಶಾಶ್ವತವಾಗಿ ಆಸ್ಪತ್ರೆ ಮುಚ್ಚಲು ಕೈಗೊಂಡಿರುವ ತೀರ್ಮಾನ ಸರಿಯಲ್ಲ. ಈ ಆಸ್ಪತ್ರೆಯನ್ನೇ ನೆಚ್ಚಿಕೊಂಡು ಉಸಿರಾಡುತ್ತಿರುವ ನೂರಾರು ಜನ ಹೆಚ್‍ಐವಿ ಸೋಂಕಿರು ಇನ್ನುಮುಂದೆ ಮಾತ್ರೆ ಪಡೆಯಲು ಮತ್ತು ಚಿಕಿತ್ಸೆಗಾಗಿ ದೂರದ ನಗರಗಳಿಗೆ ಹೋಗಬೇಕಾದ ದುಸ್ಥಿತಿ ಎದುರಾಗಲಿದೆ. ಲಕ್ಷಾಂತರ ರೂ. ಮೌಲ್ಯದ ಮಾತ್ರೆಗಳನ್ನು ಸರ್ಕಾರ ಉಚಿತವಾಗಿ ವಿತರಿಸುವಾಗ ಇದರ ವಿತರಣೆ ಮಾಡಲು ಕಂಪನಿ ಹಿಂದೇಟು ಹಾಕುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ‌‌‌. ಯಾವುದೇ ಕಾರಣಕ್ಕೂ ಎಆರ್​ಟಿ ಕೇಂದ್ರವನ್ನು ಮುಚ್ಚಬಾರದು. ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮಧ್ಯಪ್ರವೇಶಿಸುವ ಮೂಲಕ ಆಸ್ಪತ್ರೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಸ್ಥಳೀಯ ಹೋರಾಟಗಾರ ಶ್ರಾವಣಕುಮಾರ್ ಮೋಸಲಗಿ ಎಚ್ಚರಿಕೆ ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *