ಬೆಳಕೋಟಾ ಜಲಾಶಯದ ಕಾಲುವೆ ಒಡೆದು ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಬೆಳೆ ಹಾಳು
ಜಿಲ್ಲೆಯ ಕಾಳಗಿ ತಾಲ್ಲೂಕಿನ ಅರಣಕಲ್ ಗ್ರಾಮದ ಬೆಳಕೋಟಾ ಜಲಾಶಯದಿಂದ ನೀರು ಬಿಟ್ಟಿದ್ದು, ನೀರಿನ ರಭಸಕ್ಕೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನಿಗೆ ನುಗ್ಗಿದ್ದು, ಸುಮಾರು 600 ಎಕರೆಯಲ್ಲಿ ಬೆಳೆದಿದ್ದ ತೊಗರಿ, ಹೆಸರು, ಉದ್ದು, ಸೋಯಾ ಸೇರಿದಂತೆ ಮುಂಗಾರು ಬೆಳೆ ಕೊಚ್ಚಿ ಹೋಗಿದೆ. ರೈತರ ಜಮೀನಿನಲ್ಲಿ ಒಂದು ಅಡಿಗೂ ಹೆಚ್ಚು ನೀರು ಶೇಖರಣೆ ಆಗಿ ಬೆಳೆಯು ಕೊಳೆಯುತ್ತಿದೆ.
ಸಾಲ ಮಾಡಿಕೊಂಡು ಸಾವಿರಾರು ರೂ.ಗಳನ್ನು ಖರ್ಚು ಮಾಡಿ ಬೆಳೆದಿದ್ದ ಬೆಳೆ ಕಳೆದುಕೊಂಡು ಅನ್ನದಾತರು ಅಕ್ಷರಶಃ ದಿಕ್ಕೂ ತೋಚದೇ ಕಂಗಾಲಾಗಿದ್ದಾರೆ. ಎಲ್ಲ ಅನಾಹುತಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದ ನಿರ್ಮಿಸಿರುವ ಕಾಲುವೆಗಳಿಂದಾಗಿ ಕಾಲುವೆ ಒಡೆದು ನೀರು ನುಗ್ಗಿ ಬೆಳೆ ಹಾನಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರು ಆರೋಪಿಸಿದ್ದಾರೆ.
ಒಂದೆಡೆ ಬೆಳೆ ಕೊಚ್ಚಿ ಹೋಗಿದ್ದು, ಮತ್ತೊಂದೆಡೆ ನೀರಿನ ರಭಸಕ್ಕೆ ಫಲವತ್ತಾದ ಮಣ್ಣೂ ಕೂಡ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಜಮೀನಿನಲ್ಲಿ ಕಲ್ಲು ಬಂಡೆಗಳು ತೇಲಿವೆ. ರೈತರು ಮತ್ತೆ ಕೃಷಿ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಅನ್ನಕ್ಕೆ ಮಣ್ಣು ಹಾಕುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಒಡೆದಿರುವ ಕಾಲುವೆ ನವೀಕರಣ ಕೆಲಸ ಮಾಡಿ ಇನ್ನೂ ಮೂರು ತಿಂಗಳು ಕಳೆದಿಲ್ಲ. ಆಗಲೇ ಕಾಲುವೆ ಒಡೆದು ಹೋಗಿದೆ. ಕಳಪೆ ಕಾಮಗಾರಿಯಿಂದಲೇ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳಪೆ ಕಾಮಗಾರಿ ಮಾಡಿ ಹಣ ಲೂಟಿ ಮಾಡಿರುವ ನೀರಾವರಿ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಹಾನಿಯಾಗಿರುವ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಮಮಶೆಟ್ಟಿ ಅವರು ಒತ್ತಾಯಿಸಿದರು.