Belagavi Rains: ಪಶ್ಚಿಮ ಘಟ್ಟಗಳಲ್ಲಿ ತಗ್ಗಿದ ಮಳೆಯ ಅಬ್ಬರ; ಬೆಳಗಾವಿ ಜಿಲ್ಲೆಯಲ್ಲಿ ಇಳಿಕೆಯಾಗುತ್ತಿದೆ ಪ್ರವಾಹ..!
ಬೆಳಗಾವಿ(ಜುಲೈ 27): ಪಶ್ಚಿಮ ಘಟ್ಟಗಳ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನಿನ್ನೆಯಿಂದ ಬೆಳಗಾವಿ ಹಾಗೂ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ವರುಣನ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮಳೆಯ ಅಬ್ಬರ ತಗ್ಗಿದ್ದರಿಂದ ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ಹಾಗೂ ಬಳ್ಳಾರಿ ನಾಲಾದಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಇರುವ ಕೆಲವು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದ್ದು, ಇನ್ನೂ ಎರಡು- ಮೂರು ದಿನದಲ್ಲಿ ಪ್ರವಾಹ ಸಂಪೂರ್ಣವಾಗಿ ಕಡಿಮೆಯಾಗಲಿದೆ. ಆದರೆ ಪ್ರವಾಹದಿಂದ ಆಗಿರೋ ಹಾನಿ ಮಾತ್ರ ಜನರನ್ನು ಸಂಕಷ್ಟಕ್ಕೆ ತಳ್ಳಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಕಡಿಮೆಯಾಗಿದ್ದು, ಸದ್ಯ ಜನಜೀವನ ಯಥಾಸ್ಥಿತಿಗೆ ಬರುತ್ತಿದೆ. ಆದರೆ ಪ್ರವಾಹದಿಂದ ಆಗಿರುವ ಹಾನಿ ಮಾತ್ರ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳಿಗೆ ಒಳ ಹರಿವು ಸಹ ಕಡಿಮೆಯಾಗಿದೆ. ಪ್ರಮುಖವಾಗಿ ಘಟಪ್ರಭಾ ಜಲಾಶಯಕ್ಕೆ ಇಂದು 45 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಮಲಪ್ರಭಾ ಜಲಾಶಯಕ್ಕೂ 16 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಎರಡು ಜಲಾಶಯಗಳ ಭರ್ತಿಗೆ ಕೇವಲ ಕೆಲವೇ ಅಡಿಗಳು ಬಾಕಿ ಉಳಿದಿದೆ.
ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾ ನೀರು ಸಹ ಕಡಿಮೆಯಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಸುರಿದ ಮಳೆಯ ಪರಿಣಾಮವಾಗಿ ಕೃಷ್ಣಾ ನದಿಯಲ್ಲಿ ನೀರು ಎಂದಿನಂತೆ ಹರಿದು ಬರುತ್ತಿದೆ. ಇನ್ನೂ ಎರಡು ಮೂರು ದಿನ ಇದೇ ರೀತಿಯಲ್ಲಿ ನೀರು ಹರಿದು ಬರಲಿದ್ದು, ನಂತರ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ. ರಸ್ತೆ, ಸೇತುವೆ, ಕೃಷಿ ಭೂಮಿ, ಮನೆಗಳು ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಜಿಲ್ಲೆಯಲ್ಲಿ 890 ಕಿ.ಮೀ ರಸ್ತೆ ಕೊಚ್ಚಿಕೊಂಡು ಹೋಗಿದ್ದು, 52 ಸೇತುವೆಗಳಿಗೆ ಹಾನಿಯಾಗಿದೆ. ಜಿಲ್ಲೆಯ 145 ಗ್ರಾಮಗಳಿಗೆ ಪ್ರವಾಹದಿಂದ ಎಫೆಕ್ಟ್ ಆಗಿದ್ದು, 34145 ಜನರಲ್ಲಿ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಜಿಲ್ಲೆಯಲ್ಲಿ 129 ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಮಳೆ, ಪ್ರವಾಹದಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರೋ ಬೆಳಗಳು ಕೊಚ್ಚಿಕೊಂಡು ಹೋಗಿವೆ. ಪ್ರವಾಹ ಸ್ಥಿತಿ ಸಂಪೂರ್ಣ ಕಡಿಮೆಯಾದ ಬಳಿಕ ಈ ಬಗ್ಗೆ ಸರ್ವೇ ಕಾರ್ಯ ನಡೆಯಲಿದೆ.