Tokyo Olympics – ಸ್ಪೇನ್ ವಿರುದ್ಧ ಭಾರತ ಹಾಕಿ ತಂಡಕ್ಕೆ ಭರ್ಜರಿ ಗೆಲುವು; ಕ್ವಾರ್ಟರ್​ಫೈನಲ್ ಆಸೆ ಜೀವಂತ

ಟೋಕಿಯೋ, ಜಪಾನ್ (ಜುಲೈ 27): ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡ ಎರಡನೇ ಗೆಲುವು ದಾಖಲಿಸಿತು. ತನ್ನ ಗ್ರೂಪ್ ಹಂತದ ಮೂರನೇ ಪಂದ್ಯದಲ್ಲಿ ಪ್ರಬಲ ಸ್ಪೇನ್ ವಿರುದ್ಧ ಭಾರತ 3-0 ಗೋಲುಗಳಿಂದ ಸೋಲಿಸಿತು. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 1-7 ಗೋಲುಗಳಿಂದ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡಕ್ಕೆ ಸ್ಪೇನ್ ವಿರುದ್ಧದ ಗೆಲುವು ಬಹಳ ಮಹತ್ವದ್ದಾಗಿದೆ. ಈ ಗೆಲುವಿನೊಂದಿಗೆ ಭಾರತ ಕ್ವಾರ್ಟರ್​ಫೈನಲ್ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಮೂರು ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ ಭಾರತ 6 ಅಂಕ ಗಳಿಸಿ ತನ್ನ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ.

ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳಿಂದ ಸೋಲಿಸಿದ್ದ ಭಾರತಕ್ಕೆ ಗ್ರೂಪ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನಾಡುವ ಅವಕಾಶ ಇದೆ. ಜುಲೈ 29ರಂದು ಅರ್ಜೆಂಟೀನಾ ವಿರುದ್ಧ ಹಾಗೂ ಜುಲೈ 30ರಂದು ಆತಿಥೇಯ ಜಪಾನ್ ತಂಡದ ವಿರುದ್ಧ ಭಾರತ ಆಡಬೇಕಿದೆ. ತಲಾ ಆರು ತಂಡಗಳಿರುವ ಎರಡು ಗುಂಪುಗಳಿದ್ದು ಪ್ರತೀ ಗುಂಪಿನಲ್ಲಿ ಅಗ್ರ ನಾಲ್ಕು ಸ್ಥಾನಗಳನ್ನ ಪಡೆದ ತಂಡಗಳು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸುತ್ತವೆ. ಭಾರತ ಇರುವ ಎ ಗುಂಪಿನಲ್ಲಿ ಸದ್ಯ ಆಸ್ಟ್ರೇಲಿಯಾ ತಂಡ ಅಗ್ರಸ್ಥಾನದಲ್ಲಿದೆ. ಭಾರತಕ್ಕೆ ಬಾಕಿ ಇರುವ ಎರಡು ಎದುರಾಳಿಗಳ ಪೈಕಿ ಜಪಾನ್ ತಂಡ ಹೋಲಿಕೆಯಲ್ಲಿ ತುಸು ದುರ್ಬಲ. ಜಪಾನ್ ವಿರುದ್ಧ ಭಾರತಕ್ಕೆ ಗೆಲುವಿನ ಸಾಧ್ಯತೆ ದಟ್ಟವಾಗಿದೆ. ತನ್ನ ಗುಂಪಿನಲ್ಲಿ ಭಾರತ 2 ಅಥವಾ 3ನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸುವ ನಿರೀಕ್ಷೆ ಇಟ್ಟುಕೊಳ್ಳಬಹುದು.

ಇನ್ನು, ಇವತ್ತು ಒಲಿಂಪಿಕ್​ನಲ್ಲಿ ಭಾರತ ಸ್ಪರ್ಧಿಸಿರುವ ಇತರ ಕ್ರೀಡೆಗಳಲ್ಲಿ ಭಾರತಕ್ಕೆ ಮತ್ತೆ ನಿರಾಸೆ ಕಾಡುತ್ತಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಕ್ವಾಲಿಫಿಕೇಶನ್​ನ ಎರಡನೇ ಹಂತದಿಂದ ಭಾರತದ ಮನು ಭಾಕರ್ ಮತ್ತು ಸೌರಭ್ ಚೌಧರಿ ಹೊರಬಿದ್ದಿದ್ದಾರೆ. ಯಶಸ್ವಿನಿ ದೇಸವಾಲ್ ಮತ್ತು ಅಭಿಷೇಕ್ ವರ್ಮಾ ಜೋಡಿ ಮೊದಲ ಸ್ಟೇಜ್​ನಲ್ಲಿ ನಿರ್ಗಮಿಸಿತ್ತು. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್ ಫೈನಲ್ ತಲುಪಲು ವಿಫಲವಾಗಿದೆ.

ಇದು ಬಿಟ್ಟರೆ ಟೇಬಲ್ ಟೆನಿಸ್​ನಲ್ಲಿ ಎಲ್ಲರ ಚಿತ್ತ ಅಚಂತ ಶರತ್ ಕಮಲ್ ಅವರ 3ನೇ ಸುತ್ತಿನ ಪಂದ್ಯದ ಮೇಲೆ ನೆಟ್ಟಿದೆ. ಹಾಗೆಯೇ ಶೂಟಿಂಗ್​ನ 10 ಮೀಟರ್ ಏರ್ ರೈಫಲ್ ಮಿಕ್ಸೆಡ್ ಟೀಮ್ ಕ್ವಾಲಿಫಿಕೇಶನ್ ಸ್ಪರ್ಧೆ ಕೂಡ ನಡೆಯುತ್ತಿದೆ. ಇದರಲ್ಲಿ ಭಾರತದ ಎರಡು ಜೋಡಿಗಳು ಸ್ಪರ್ಧಿಸಿವೆ. ಸೇಲಿಂಗ್ ಹಾಗೂ ಬಾಕ್ಸಿಂಗ್​ನಲ್ಲಿ ಇವತ್ತು ಭಾರತದ ಸ್ಪರ್ಧಾಳುಗಳು ಕಣದಲ್ಲಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ನಿರೀಕ್ಷಿತ ಫಲ ಸಿಕ್ಕಿಲ್ಲ. ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದಿದ್ದು ಬಿಟ್ಟರೆ ಮತ್ಯಾವುದೇ ಪದಕ ಬಂದಿಲ್ಲ. ಶೂಟಿಂಗ್ ಮತ್ತು ಬಿಲ್ಲುಗಾರಿಕೆಯಲ್ಲಿ ನಿರೀಕ್ಷಿಸಿದಂತೆ ಪದಕ ಇನ್ನೂ ದೊರೆತಿಲ್ಲ. ಪ್ರಮುಖ ಆಟಗಾರರು ನಿರಾಸೆ ಅನುಭವಿಸಿದ್ದಾರೆ. ಕುಸ್ತಿ ಮತ್ತು ಬಾಕ್ಸಿಂಗ್ ಸ್ಪರ್ಧೆಯಲ್ಲೂ ಭಾರತದ ಅಗ್ರಮಾನ್ಯ ಕ್ರೀಡಾಪಟುಗಳು ಬಹಳ ಬೇಗ ನಿರ್ಗಮಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *