ಕಾರವಾರಕ್ಕೆ ಕೊನೆಗೂ ಬಾರದ ಸಿಎಂ ಬಿಎಸ್‌ವೈ; ಮೂರೂ ಬಾರಿ ಕೊನೆ ಕ್ಷಣದಲ್ಲಿ ಕಾರ‍್ಯಕ್ರಮ ರದ್ದು!

ಹೈಲೈಟ್ಸ್‌:

  • ಯಡಿಯೂರಪ್ಪ ಅವರು ಪ್ರಸಕ್ತ ಅವಧಿಯಲ್ಲಿ ಮುಖ್ಯಮಂತ್ರಿಯಾದ ಬಳಿಕ ಕಾರವಾರಕ್ಕೆ ಬರುವ ಕಾರ್ಯಕ್ರಮ ಮೂರು ಬಾರಿ ಕೊನೆಯ ಕ್ಷಣದಲ್ಲಿ ರದ್ದಾಯಿತು
  • ಸೋಮವಾರ ರಾಜೀನಾಮೆ ನೀಡುವುದಕ್ಕೂ ಪೂರ್ವದಲ್ಲಿ ಬೆಳಗಾವಿಗೆ ಭಾನುವಾರ ಭೇಟಿ ನೀಡಿದ್ದ ವೇಳೆ ಕಾರವಾರಕ್ಕೆ ಹೋಗುವುದಾಗಿ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದರು
  • ಯಡಿಯೂರಪ್ಪ ಕಾರವಾರಕ್ಕೆ ಭೇಟಿ ನೀಡುವುದನ್ನು ಪದೇ ಪದೆ ಮುಂದೂಡುತ್ತಿದ್ದ ಹಿನ್ನೆಲೆ ಕಾರವಾರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುವ ಭಯ ಅವರಿಗಿತ್ತು ಎಂಬ ಮಾತೂ ಕೇಳಿಬಂದಿತ್ತು.

ಕಾರವಾರ: ಬಿ.ಎಸ್‌.ಯಡಿಯೂರಪ್ಪ ಪ್ರಸಕ್ತ ಅವಧಿಯಲ್ಲಿ ಮುಖ್ಯಮಂತ್ರಿಯಾದ ಬಳಿಕ ಒಮ್ಮೆಯೂ ಕಾರವಾರಕ್ಕೆ ಕಾಲಿಡದೇ ನಿರ್ಮಿಸಿರುವುದು ಇಲ್ಲಿನ ಸಾರ್ವಜನಿಕರ ನಿರಾಸೆಗೆ ಕಾರಣವಾಗಿದೆ.

ಯಡಿಯೂರಪ್ಪ ಅವರು ಪ್ರಸಕ್ತ ಅವಧಿಯಲ್ಲಿ ಮುಖ್ಯಮಂತ್ರಿಯಾದ ಬಳಿಕ ಕಾರವಾರಕ್ಕೆ ಬರುವ ಕಾರ್ಯಕ್ರಮ ಮೂರು ಬಾರಿ ಕೊನೆಯ ಕ್ಷಣದಲ್ಲಿ ರದ್ದಾಯಿತು. ಈಗ ಬಂದೇ ಬರುತ್ತಾರೆ ಎಂದು ಜನ ತುದಿಗಾಲಲ್ಲಿ ನಿಂತು ಕಾದರೇ ವಿನಃ ಯಡಿಯೂರಪ್ಪ ಅವರು ಬರಲೇ ಇಲ್ಲ. ಸೋಮವಾರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸದ್ಯ ಅವರು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬರುವ ಸಾಧ್ಯತೆ ಇಲ್ಲವಾಗಿದೆ.


ಮೂರೂ ಬಾರಿ ನಿರಾಸೆ

2019 ರ ಆಗಸ್ಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಹ ಉಂಟಾಗಿತ್ತಲ್ಲದೇ ಕಾರವಾರ ತಾಲೂಕಿನ ಕಾಳಿ ಮತ್ತು ಅಂಕೋಲಾ ತಾಲೂಕಿನ ಗಂಗಾವಳಿ ನದಿಗಳು ರೌದ್ರಾವತಾರ ತಾಳಿದ್ದವು. ಇಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮುಖ್ಯಮಂತ್ರಿ ಬರುವ ಕಾರ್ಯಕ್ರಮವನ್ನು 2019ರ ಆಗಸ್ಟ್‌ 30ರಂದು ಹಮ್ಮಿಕೊಳ್ಳಲಾಗಿತ್ತು. ಬಿಎಸ್‌ವೈ ಅವರು ಬೆಂಗಳೂರಿನಲ್ಲಿ ಹೆಲಿಕಾಪ್ಟರ್‌ ಏರಿದ್ದಾರೆ ಎಂಬಲ್ಲಿಯವರೆಗೂ ಮಾಹಿತಿ ಬಂದಿತ್ತು. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಸಹ ಹೂ ಮಾಲೆ ಹಿಡಿದು ಸ್ವಾಗತಕ್ಕಾಗಿ ಕಾದು ನಿಂತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ ಸಂಚಾರ ನಡೆಸಲಾಗದೆ ಕಾರ್ಯಕ್ರಮ ರದ್ದಾಯಿತು.

ಬಳಿಕ ಎರಡನೇ ಬಾರಿ ಇಲ್ಲಿನ ಕಾರವಾರ ಮೆಡಿಕಲ್‌ ಕಾಲೇಜಿನ ನೂತನ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲು ಕಳೆದ ಜುಲೈ 16ರಂದು ಅವರು ಕಾರವಾರಕ್ಕೆ ಆಗಮಿಸಬೇಕಿತ್ತು. ಅವರ ಪ್ರವಾಸದ ಪಟ್ಟಿಯಲ್ಲೂ ಕಾರವಾರ ಭೇಟಿ ನಿಗದಿಯಾಗಿತ್ತು. ಆದರೆ ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಜತೆ ವಿಡಿಯೊ ಕಾನ್ಫರೆನ್ಸ್‌ ಕಾರ್ಯಕ್ರಮ ನಿಗದಿಯಾದ ಕಾರಣ ಯಡಿಯೂರಪ್ಪ ಭೇಟಿ ರದ್ದಾಯಿತು.

ಇನ್ನು ಸೋಮವಾರ ರಾಜೀನಾಮೆ ನೀಡುವುದಕ್ಕೂ ಪೂರ್ವದಲ್ಲಿ ಬೆಳಗಾವಿಗೆ ಭಾನುವಾರ ಭೇಟಿ ನೀಡಿದ್ದ ವೇಳೆ ಕಾರವಾರಕ್ಕೆ ಹೋಗುವುದಾಗಿ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ದರು. ಉತ್ತರಕನ್ನಡ ಜಿಲ್ಲೆಯಲ್ಲೂ ಪ್ರವಾಹದಿಂದ ಭಾರಿ ಸಾವು ನೋವು ನಷ್ಟ ಉಂಟಾಗಿದ್ದರಿಂದ ಭೇಟಿ ನೀಡುವ ಕುರಿತು ಸೋಮವಾರ ನಿರ್ಧರಿಸುವುದಾಗಿ ಅವರೇ ಹೇಳಿದ್ದರು. ಆದರೆ ಸೋಮವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಕಾರವಾರಕ್ಕೆ ಬರುವುದು ಮರೀಚಿಕೆಯಾಗಿಯೇ ಉಳಿದಿದೆ.

ಅಧಿಕಾರ ಕಳೆದುಕೊಳ್ಳುವ ಭಯವಿತ್ತೆ?
ಕಾರವಾರಕ್ಕೆ ಬರುವ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ವದಂತಿಯೊಂದು ಪ್ರಚಲಿತದಲ್ಲಿದೆ. ಈ ಹಿಂದೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಕಾರವಾರಕ್ಕೆ ಬಂದ ಕೆಲವೇ ದಿನಗಳಲ್ಲಿಸ್ಥಾನ ಕಳೆದುಕೊಂಡಿದ್ದರು. ಇನ್ನು ಯಡಿಯೂರಪ್ಪ ಕಾರವಾರಕ್ಕೆ ಭೇಟಿ ನೀಡುವುದನ್ನು ಪದೇ ಪದೆ ಮುಂದೂಡುತ್ತಿದ್ದ ಹಿನ್ನೆಲೆಯಲ್ಲಿ ಕಾರವಾರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುವ ಭಯ ಅವರಿಗಿತ್ತು ಎಂಬ ಮಾತೂ ಕೇಳಿಬಂದಿತ್ತು.

ಬಿ.ಎಸ್‌.ಯಡಿಯೂರಪ್ಪ ಅವರು ಕಾರವಾರಕ್ಕೆ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಇಲ್ಲಿಗೆ ಬರದೇ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವುದು ನಿರಾಸೆ ತಂದಿದೆ.
ನಾಗೇಶ ನಾಯ್ಕ, ಸ್ಥಳೀಯರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *