ಲಕ್ಕಸಂದ್ರದ ಮೂರು ಅಂತಸ್ತಿನ ಕಟ್ಟಡ ಬಿದ್ದ ಪ್ರಕರಣ.. ಎಸ್ಕೇಪ್ ಆಗಿದ್ದ ಮನೆ ಮಾಲೀಕ ಸುರೇಶ್ ಅರೆಸ್ಟ್
ಬೆಂಗಳೂರು: ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡ ಕುಸಿದು ಬಿದ್ದ ಪ್ರಕರಣದಲ್ಲಿ ಎಸ್ಕೆಪ್ ಆಗಿದ್ದ ಮನೆ ಮಾಲೀಕ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆ ಬೆಳಗ್ಗೆ ವಿಲ್ಸನ್ ಗಾರ್ಡನ್ ಬಳಿಯ ಲಕ್ಕಸಂದ್ರದ 7ನೇ ಮುಖ್ಯ ರಸ್ತೆ, 14ನೇ ಅಡ್ಡ ರಸ್ತೆಯಲ್ಲಿದ್ದ ಕಟ್ಟಡ ಕುಸಿದು ಬಿದ್ದಿತ್ತು. 1962 ರಲ್ಲಿ ನಿರ್ಮಿಸಿದ್ದ ಈ ಕಟ್ಟಡ ಶಿಥಿಲವಾಗಿತ್ತು. ಕಟ್ಟಡವನ್ನು ತೆರವುಗೊಳಿಸುವಂತೆ ಬಿಬಿಎಂಪಿ ನೋಟಿಸ್ ನೀಡಿದ್ದರೂ ಸಹ ಕಟ್ಟಡ ಮಾಲೀಕ ಸುರೇಶ್ ಕಟ್ಟಡವನ್ನು ತೆರವುಗೊಳಿಸಿರಲಿಲ್ಲ. ಈ ಕಟ್ಟಡದಲ್ಲಿ ಸಮೀಪದಲ್ಲಿ ಮೆಟ್ರೋ ಕಾಮಗಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 50 ಕ್ಕೂ ಹೆಚ್ಚು ಕಾರ್ಮಿಕರು ವಾಸಿಸುತ್ತಿದ್ದರು.
ನಿನ್ನೆ ಬೆಳಗ್ಗೆ ಕಟ್ಟಡ ಕುಸಿದಾಗ ಅವರೆಲ್ಲರೂ ಕೆಲಸಕ್ಕೆ ತೆರಳಿದ್ದರಿಂದ ಮತ್ತು ಸ್ಥಳೀಯರ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಕಟ್ಟಡ ಕುಸಿಯುತ್ತಿದ್ದಂತೆ ಸುರೇಶ್ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಪೊಲೀಸರು ಇಂದು ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.