ಬ್ರಿಟನ್‌ ತೈಲ ಬಿಕ್ಕಟ್ಟು:90% ಪಂಪ್‌ಗಳು ಖಾಲಿ, ಪೆಟ್ರೋಲ್‌ ಇಲ್ಲ!

* ಟ್ರಕ್‌ ಚಾಲಕರ ಕೊರತೆಯಿಂದ ಸಮಸ್ಯೆ

* ಬ್ರಿಟನ್‌ ತೈಲ ಬಿಕ್ಕಟ್ಟು:90% ಪಂಪ್‌ಗಳು ಖಾಲಿ

* ಪೆಟ್ರೋಲ್‌ ಬಂಕ್‌ಗಳ ಮುಂದೆ ಜನಸಾಗರ

ಲಂಡನ್‌(ಸೆ.29): ಬ್ರಿಟನ್‌ನಲ್ಲಿ ಹಿಂದೆಂದೂ ಕಂಡುಕೇಳರಿಯದ ತೈಲ ಬಿಕ್ಕಟ್ಟೊಂದು ಸೃಷ್ಟಿಯಾಗಿದೆ. ಅಗತ್ಯ ಪ್ರಮಾಣದ ತೈಲ ಸಂಗ್ರಹ ಇದ್ದಾಗಿಯೂ ಜನರು ಆತಂಕಕ್ಕೆ ಒಳಗಾಗಿ ಪೆಟ್ರೋಲ್‌ ಪಂಪ್‌ ಎದುರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲುಗಳಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಂತ ಈ ಬಿಕ್ಕಟ್ಟಿಗೆ ಕಾರಣ ಪೆಟ್ರೋಲ್‌, ಡೀಸೆಲ್‌ ಕೊರತೆ ಅಲ್ಲ; ಟ್ರಕ್‌ ಚಾಲಕರ ಕೊರತೆ! ಹೌದು, ಪೆಟ್ರೋಲ್‌ ಪಂಪ್‌ಗಳಿಗೆ ತೈಲವನ್ನು ಕೊಂಡೊಯ್ಯಲು ಟ್ರಕ್‌ ಚಾಲಕರೇ ಸಿಗುತ್ತಿಲ್ಲ. ಹೀಗಾಗಿ ದೇಶದ ಪ್ರಮುಖ ನಗರಗಳ ಶೇ.90ರಷ್ಟುಪೆಟ್ರೋಲ್‌ ಪಂಪ್‌ಗಳು ಖಾಲಿಯಾಗಿವೆ. ಈ ಸುದ್ದಿ ತಿಳಿದ ಜನರು ಗಾಬರಿಗೊಳಗಾಗಿ ಇನ್ನುಳಿದ ಪಂಪ್‌ಗಳಿಗೆ ಮತ್ತಿಗೆ ಹಾಕುತ್ತಿದ್ದಾರೆ.

ಬಿಕ್ಕಟ್ಟಿಗೆ ಕಾರಣ ಏನು?:

ಬ್ರಿಟನ್‌ ಐರೋಪ್ಯ ಒಕ್ಕೂಟದಿಂದ ಹೊರಬಂದ ಬಳಿಕ 13 ಲಕ್ಷಕ್ಕೂ ಅಧಿಕ ವಿದೇಶಿ ಕಾರ್ಮಿಕರು ದೇಶ ತೊರೆದಿದ್ದಾರೆ. ಹೀಗಾಗಿ 2 ವರ್ಷದಲ್ಲಿ ಬ್ರಿಟನ್‌ 1 ಲಕ್ಷಕ್ಕೂ ಅಧಿಕ ಟ್ರಕ್‌ ಚಾಲಕರನ್ನು ಕಳೆದುಕೊಂಡಿದೆ. ಅಲ್ಲದೆ ಕೊರೋನಾ ಕಾರಣದಿಂದ ತವರಿಗೆ ಮರಳಿದವರು ಇನ್ನೂ ಕೆಲಸಕ್ಕೆ ಬಂದಿಲ್ಲ. ಪರವಾನಗಿ ವಿತರಣೆಯೂ ನನೆಗುದಿಗೆ ಬಿದ್ದಿದೆ. ಹೀಗಾಗಿ ಹೊಸ ರೀತಿಯ ತೈಲ ಬಿಕ್ಕಟ್ಟು ಆರಂಭವಾಗಿದೆ.

ಸರ್ಕಾರದಿಂದ ಕ್ರಮ:

ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಬ್ರಿಟನ್‌ ಸರ್ಕಾರ ಯೋಧರನ್ನೇ ಚಾಲಕರನ್ನಾಗಿ ನೇಮಿಸಲು ಮುಂದಾಗಿದೆ. ಜೊತೆಗೆ 5000 ವಿದೇಶಿ ಟ್ರಕ್‌ ಚಾಲಕರನ್ನು ಕರೆತರಲು ತುರ್ತು ವೀಸಾ ನೀಡಲು ನಿರ್ಧರಿಸಿದೆ. ಕಾಂಪಿಟೀಷನ್‌ ಆ್ಯಕ್ಟ್ 1998ನಿಂದ ತೈಲೋದ್ಯಮಕ್ಕೆ ವಿನಾಯ್ತಿ ನೀಡಲು ಚಿಂತಿಸಿದೆ. ಘನವಾಹನ ಚಾಲನೆ ಪರವಾನಗಿ ಇರುವವರಿಗೆ ಕೆಲಸಕ್ಕೆ ಮರಳುವಂತೆ ವಿನಂತಿಸಿದೆ. ನಾಲ್ಕು ಸಾವಿರ ಜನರಿಗೆ ಘನ ವಾಹನ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಿದೆ.

– ಬ್ರಿಟನ್‌ ಐರೋಪ್ಯ ಒಕ್ಕೂಟದಿಂದ ಹೊರಬಂದ ಬಳಿಕ 13 ಲಕ್ಷ ಕಾರ್ಮಿಕರು ಸ್ವದೇಶಕ್ಕೆ ವಾಪಸ್‌

– ಕೆಲಸ ತೊರೆದ 1 ಲಕ್ಷಕ್ಕೂ ಅಧಿಕ ಟ್ರಕ್‌ ಚಾಲಕರು

– ತೈಲ ಸಾಗಣೆಗೆ ಡ್ರೈವರ್‌ಗಳ ಕೊರತೆ, ಪಂಪ್‌ಗಳಿಗೆ ಸಮಸ್ಯೆ

– ಆತಂಕಕ್ಕೊಳಗಾದ ಜನರಿಂದ ಅತಿಯಾದ ಖರೀದಿ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *