ಕನ್ನಡ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ; ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣು
ನವದೆಹಲಿ : ಕನ್ನಡ ಕಿರುತೆರೆ ನಟಿ ಸೌಜನ್ಯಾ ಆತ್ಮಹತ್ಯೆ (soujanya suicide) ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸೌಜನ್ಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬರೆದ ನಾಲ್ಕು ಪುಟಗಳ ಡೆತ್ ನೋಟ್ (Death note)ಸೌಜನ್ಯ ಮನೆಯಲ್ಲಿ ಪತ್ತೆಯಾಗಿದೆ.
ಹದಗೆಡುತ್ತಿರುವ ಆರೋಗ್ಯ ಮತ್ತು ಉದ್ಯಮದಲ್ಲಿನ ಪ್ರಸ್ತುತ ವಾತಾವರಣದಿಂದಾಗಿ, ಕಳೆದ ಹಲವು ದಿನಗಳಿಂದ ತೊಂದರೆಗೀಡಾಗಿರುವುದಾಗಿ ಡೆಟ್ ನೋಟ್ ನಲ್ಲಿ (Death note) ಹೇಳಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಆತ್ಮಹತ್ಯೆ (Actor suicide) ಹೊರತಾಗಿ ಬೇರೆ ಯಾವ ದಾರಿಯೂ ಉಳಿದಿಲ್ಲ ಎಂದು ಬರೆದಿದ್ದಾರೆ.
ತಾನು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಬೇರೆಯವರನ್ನು ದೂಷಿಸುವುದಿಲ್ಲ, ತನ್ನ ಆತ್ಮಹತ್ಯೆಗೆ (Suicide) ತಾನು ಮಾತ್ರ ಕಾರಣ ಎಂದು ಸೌಜನ್ಯ ಬರೆದಿದ್ದಾರೆ. ಅಲ್ಲದೆ ತನಗೆ ಸಹಾಯ ಮಾಡಿದ ಎಲ್ಲ ಜನರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಆತ್ಮಹತ್ಯೆ ಪತ್ರದಲ್ಲಿ ಸೆಪ್ಟೆಂಬರ್ 27, 28 ಮತ್ತು 30 ಈ ಮೂರು ತಾರೀಕುಗಳನ್ನು ಬರೆಯಲಾಗಿದೆ. ಈ ಕಾರಣದಿಂದಾಗಿ ನಟಿ ಕಳೆದ ಮೂರು ದಿನಗಳಿಂದಲೂ ಆತ್ಮಹತ್ಯೆಗೆ ನಿರ್ಧರಿಸಿದ್ದರು ಎಂದು ಪೊಲೀಸರು (police) ತಿಳಿಸಿದ್ದಾರೆ. ಸೌಜನ್ಯಾ ಮೃತದೇಹವನ್ನು ಹೊರ ತೆಗೆಯಲು, ಅವರ ಕೋಣೆಯ ಬಾಗಿಲು ಒಡೆಯಬೇಕಾಯಿತು ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಆಕೆಯ ಕಾಲಿನ ಮೇಲೆ ಹಾಕಿರುವ ಅಚ್ಚೆಯನ್ನು ಐಡೆಂಟಿಫಿಕೇಶನ್ ಮಾರ್ಕ್ ಆಗಿ ಗುರುತಿಸಿದ್ದಾರೆ.
ಸೌಜನ್ಯ ಕುಶಾಲನಗರದವರಾಗಿದ್ದು, ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಚೌಕಟ್ಟು ಸಿನೆಮಾದಲ್ಲಿ ನಟಿಸಿದ್ದಾರೆ.