ಕಾಂಗ್ರೆಸ್’ಗೆ ಬಿಗ್ ಶಾಕ್ : 600ಮುಖಂಡರು, 3000 ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ

ಬೆಂಗಳೂರು : ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಾಂಗ್ರೆಸ್ ಪಕ್ಷದ ಸುಮಾರು ಆರನೂರಕ್ಕೂ ಹೆಚ್ಚು ಮುಖಂಡರು ಹಾಗೂ ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಇಂದು ಪಕ್ಷದ ವರಿಷ್ಠ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬಿಡದಿಯ ತೋಟದಲ್ಲಿ ಬೆಳಗ್ಗೆ ಹೆಚ್.ಡಿ.ಕೋಟೆ ತಾಲೂಕಿನ ಹಿರಿಯ ಮುಖಂಡ ಕೃಷ್ಣನಾಯಕ್ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರಿದ ಅಷ್ಟೂ ಕಾರ್ಯಕರ್ತರನ್ನು ಕುಮಾರಸ್ವಾಮಿ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.

ಬಳಿಕ ಮಾಜಿ ಮುಖ್ಯಮಂತ್ರಿಗಳ ಜತೆ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಗೆ ಬಂದರಲ್ಲದೆ, ಹಸಿರು ಶಾಲು ಧರಿಸಿಕೊಳ್ಳುವ ಮೂಲಕ ಜನತಾ ಪರಿವಾರಕ್ಕೆ ಪ್ರವೇಶ ಪಡೆದರು. ಇವರೆಲ್ಲರೂ ಕುರುಬ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹ ಸಂಗತಿ. ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿದೆ. ತಳಮಟ್ಟದಲ್ಲಿ ಸಶಕ್ತವಾಗಿ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗಟ್ಟಿಯಾಗಿ ಪಕ್ಷವನ್ನು ಕಟ್ಟಬೇಕು ಹಾಗೂ ಎಲ್ಲರೂ ಅವಿರತವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷ್ಣನಾಯಕ್ ಅವರು; “ಪಕ್ಷದ ನೀತಿ, ಸಿದ್ದಾಂತ ಹಾಗೂ ಎರಡು ಅವಧಿಯಲ್ಲಿ ಕುಮಾರಸ್ವಾಮಿ ಅವರು ಮಾಡಿದ ಜನಪರ ಕೆಲಸಗಳನ್ನು ಮೆಚ್ಚಿ ಜೆಡಿಎಸ್ ಸೇರಿದ್ದೇವೆ. ಪಕ್ಷಕ್ಕಾಗಿ ಅಹರ್ನಿಶಿ ದುಡಿಯುತ್ತೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಎಲ್ಲಾ ಶ್ರಮ ಹಾಕಲಾಗುವುದು. ಮುಂದೆ ಪಕ್ಷ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.

ಹೆಚ್.ಡಿ. ಕೋಟೆ ತಾಲೂಕಿನ ಕಾಂಗ್ರೆಸ್ ಪಕ್ಷದ ಇತರೆ ಮುಖಂಡರಾದ ಕಾಡಾದ ಮಾಜಿ ಅಧ್ಯಕ್ಷ ಯತೀಶ್ ಕುಮಾರ್, ರಾಜಪ್ಪ, ಕೃಷ್ಣೇಗೌಡ, ಮಹಾದೇವ, ರವಿಚಂದ್ರ, ಮುನಿಕೃಷ್ಣ ಗೌಡ, ರವಿ, ಎನ್.ರವಿ, ಕೃಷ್ಣಮೂರ್ತಿ, ಕೀರ್ತಿ ಕುಮಾರ್ ಮುಂತಾದ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಸೇರಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *