ಬೆಳಗಾವಿ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜಾರಿ ಬಿದ್ದ ಯುವಕ: 140 ಅಡಿ ಕೆಳಗೆ ಬಿದ್ದರೂ ಬದುಕುಳಿದ ಭೂಪ!

ಬೆಳಗಾವಿ: ಕಲ್ಲು ಬಂಡೆಗಳ ನಡುವೆ 140 ಅಡಿ ಕಂದಕಕ್ಕೆ‌ ಬಿದ್ದರೂ ಯುವಕ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾನೆ. ಸ್ನೇಹಿತರೊಂದಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್​ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರದೀಪ್‌ ಸಾಗರ್ ಎಂಬ ಯುವಕ ಆಯತಪ್ಪಿ ಶನಿವಾರ ಸಂಜೆ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದ.

ಸ್ನೇಹಿತರೊಂದಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್​ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರದೀಪ ಸಾಗರ್, ಅಕ್ಟೋಬರ್​ 2 ಸಂಜೆ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದ. ಕೂಡಲೇ ಪ್ರದೀಪ್​ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗೋಕಾಕ್​ ಪೊಲೀಸರು ಹಾಗೂ ಅಗ್ನಿಶಾಮಕ ದಳದ‌ ಸಿಬ್ಬಂದಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ.

ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ‌‌ಸ್ಥಗಿತಗೊಳಿಸಿ  ನಿನ್ನೆ ಸಿಬ್ಬಂದಿಗಳು ವಾಪಸ್ ತೆರಳಿದ್ದರು. 140 ಅಡಿ ಆಳದ ಕಂದಕಕ್ಕೆ ಬಿದ್ದ ಪ್ರದೀಪ ಪ್ರಜ್ಞೆ ಕಳೆದುಕೊಂಡಿದ್ದರು. ಹೀಗಾಗಿ ಇಡೀ ರಾತ್ರಿ ಕಂದಕದಲ್ಲೆ ಪ್ರದೀಪ ಸಾಗರ್ ಕಾಲ ಕಳೆಯಬೇಕಾಗಿತು.

ಬೆಳಗಿನಜಾವ 3 ಗಂಟೆಗೆ ಪ್ರದೀಪ್​ ಪ್ರಜ್ಞೆ ಬಂದ ಮೇಲೆ ತಾನೇ ಸ್ನೇಹಿತರಿಗೆ ಫೋನ್ ಮಾಡಿದ್ದಾರೆ. ಬಳಿಕ ಗೋಕಾಕ್​ದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡ ಪ್ರದೀಪನನ್ನು ರಕ್ಷಣೆ ಮಾಡಿದೆ. ಬೆಳಗ್ಗೆ 5.30ರ ವೇಳೆಗೆ ಆತನನ್ನು ತಂಡ ರಕ್ಷಿಸಿ ಕರೆ ತಂದಿದ್ದಾಗಿ ಅಯೂಬ್ ಖಾನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸದ್ಯ ಪ್ರದೀಪನನ್ನು ರಕ್ಷಿಸಿ ಗೋಕಾಕ್ ನ ಖಾಸಗಿ ಆಸ್ಪತ್ರೆಗೆಪೊಲೀಸರು ದಾಖಲಿಸಿದ್ದಾರೆ. ಬೆಳಗಾವಿಯ ನಗರದಲ್ಲಿ ವಾಸವಿದ್ದ  ಪ್ರದೀಪ್ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *