ರಾಜ್ಯದ ಹಲವೆಡೆ ಮುಂದಿನ 2 ದಿನ ಭಾರೀ ಮಳೆ: ಆರೆಂಜ್‌ ಅಲರ್ಟ್‌ ಘೋಷಣೆ

*  ದಕ್ಷಿಣ ಒಳನಾಡಿನ ಇನ್ನಿತರ ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್‌’
*  ಶಹೀನ್‌ ಚಂಡಮಾರುತ ಮತ್ತು ವಾಯುಭಾರ ಕುಸಿತದ ಪರಿಣಾಮ ಹೆಚ್ಚಿನ ಮಳೆ
*  ಮೈಸೂರಿನ ಸರಗೂರು ತಲಾ 6 ಸೆಂಮೀ ಮಳೆ

 

ಬೆಂಗಳೂರು(ಅ.04):  ರಾಜ್ಯದ ದಕ್ಷಿಣ ಒಳನಾಡಿನ ಮಲೆನಾಡು ಜಿಲ್ಲೆಗಳ ಪೈಕಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಯಲ್ಲಿ ಮಂಗಳವಾರ ಮತ್ತು ಬುಧವಾರ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ‘ಆರೆಂಜ್‌ ಅಲರ್ಟ್‌’(Orange Alert) ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಇನ್ನಿತರ ಜಿಲ್ಲೆಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ‘ಯೆಲ್ಲೋ ಅಲರ್ಟ್‌’(Yellow Alert) ಘೋಷಿಸಲಾಗಿದೆ.

ಸೋಮವಾರ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ(Rain) ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಶಹೀನ್‌ ಚಂಡಮಾರುತ ಮತ್ತು ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಲಿದೆ.

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗಿನ ವಿರಾಜಪೇಟೆ, ಪೊನ್ನಂಪೇಟೆ, ಮೈಸೂರಿನ ಸರಗೂರು ತಲಾ 6 ಸೆಂಮೀ, ದಕ್ಷಿಣ ಕನ್ನಡದ ಮಾಣಿ, ಕೊಡಗಿನ ಸುಂಟಿಕೊಪ್ಪ, ಕುಶಾಲನಗರ, ಚಾಮರಾಜನಗರದ ಬಂಡೀಪುರದಲ್ಲಿ ತಲಾ 5 ಸೆಂಮೀ ಮಳೆಯಾಗಿದೆ.

 

ಭಾರೀ ಮಳೆಗೆ ಬೆಂಗ್ಳೂರು ತತ್ತರ

ಬೆಂಗಳೂರು(Bengaluru) ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭರ್ಜರಿ ಮಳೆಗೆ(Rain) ಕೆಲವೆಡೆ ಮರ ಮತ್ತು ಮರದ ಕೊಂಬೆಗಳು ಮುರಿದು ಬಿದ್ದಿವೆ. ನಗರದ ಪ್ರಮುಖ ರಸ್ತೆಗಳು, ಅಂಡರ್‌ ಪಾಸ್‌ಗಳು ಸಂಪೂರ್ಣ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಯಿತು.

ಮಧ್ಯಾಹ್ನದ ಬಳಿಕ ಅಲ್ಲಲ್ಲಿ ತುಂತುರು ರೂಪದಲ್ಲಿ ಪ್ರಾರಂಭಗೊಂಡ ಮಳೆ ರಾತ್ರಿ ಆಗುತ್ತಿದ್ದಂತೆ ನಗರದೆಲ್ಲೆಡೆ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದು ಆವಾಂತರ ಸೃಷ್ಟಿಸಿತು. ಮಿಂಚು ಮತ್ತು ಗಾಳಿ ಸಹಿತ ಸುರಿದ ಭಾರಿ ಮಳೆಗೆ ನಗರದ ಫ್ರೆಜರ್‌ ಟೌನ್‌, ಮಲ್ಲೇಶ್ವರಂನಲ್ಲಿ ತಲಾ ಒಂದು ಮರವೊಂದು ಬಿದ್ದಿದ್ದು, ಲಿಂಗರಾಜಪುರಂನ ಕೆಎಸ್‌ಎಫ್‌ಸಿ ಬಡಾವಣೆ ಸೇರಿದಂತೆ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದ ಬಗ್ಗೆ ವರದಿಯಾಗಿದೆ. ಯಾವುದೇ ಅನಾಹುತ ಘಟಿಸಿಲ್ಲ. ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಸಿಬ್ಬಂದಿ ಬಿದ್ದ ಮರ ಮತ್ತು ಕೊಂಬೆಯನ್ನು ತೆರವುಗೊಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *