ಮುನಿರತ್ನ ಪಕ್ಷಾಂತರ ವಿಷಯ ಕೆಣಕಿದ ಡಿಕೆಸು : ಸಿಎಂ ಜೊತೆ ವಾಕ್ಸಮರ

ಬೆಂಗಳೂರು (ಅ.04):  ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ (DK Suresh) ಅವರ ನಡುವೆ ಮಾತಿನ ಏಟು-ಎದಿರೇಟಿಗೆ ಸಾಕ್ಷಿಯಾಯಿತು. ಸಚಿವ ಮುನಿರತ್ನ (Muniratna) ವಿರುದ್ಧ ಸುರೇಶ್‌ ಅವರು ಮಾಡಿದ ವಾಗ್ದಾಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಪ್ರತ್ಯುತ್ತರ ನೀಡಿದರು.

ಸಂಸದ ಡಿ.ಕೆ.ಸುರೇಶ್‌: ಕಾಂಗ್ರೆಸ್‌ ಸರ್ಕಾರದ (Congress Govt) ಅವಧಿಯಲ್ಲಿ ಶಾಸಕ ಮುನಿರತ್ನ ಅವರು ಈ ಕೆರೆ ಅಭಿವೃದ್ಧಿಗೆ ಯೋಜನೆ ತಯಾರಿಸಿ ಹಣ ನಿಗದಿ ಮಾಡಿಸಿದ್ದರು. ಈಗ ಅನೇಕ ಬದಲಾವಣೆ ಬಳಿಕ ಕೆರೆಗೆ ಹೊಸ ವಿನ್ಯಾಸ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. 73 ಎಕರೆ ಕೆರೆ ಅಭಿವೃದ್ಧಿಗೆ ಮೂರನೇ ಬಾರಿ ಗುದ್ದಲಿ ಪೂಜೆಯಾಗುತ್ತಿದೆ. ಸಚಿವ ಮುನಿರತ್ನ ಅವರು ಕಾಂಗ್ರೆಸ್‌ನಲ್ಲಿ ಇದ್ದರೆ ನಾನು ಮಂತ್ರಿ ಆಗಲ್ಲ ಎಂದು ಬಿಜೆಪಿಗೆ (BJP) ಬಂದಿದ್ದಾರೆ. ಅಭಿವೃದ್ಧಿ ಮಾಡುವುದು ಎಷ್ಟುಮುಖ್ಯವೋ ಜನರ ನಂಬಿಕೆ ಉಳಿಸಿಕೊಳ್ಳುವುದು ಅಷ್ಟೇ ಮುಖ್ಯ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಕಾಂಗ್ರೆಸ್‌ನಲ್ಲಿದ್ದರೆ ತಮ್ಮ ಕ್ಷೇತ್ರ ಅಭಿವೃದ್ಧಿಯಾಗುವುದಿಲ್ಲ ಎಂಬುದನ್ನು ಮನಗಂಡು ಮುನಿರತ್ನ ಬಿಜೆಪಿಗೆ ಬಂದಿದ್ದಾರೆ. ತಮ್ಮ ರಾಜಕೀಯ ಭವಿಷ್ಯ ಪಣಕ್ಕಿಟ್ಟು ತ್ಯಾಗ ಮಾಡಿ ಕ್ಷೇತ್ರದ ಜನರಿಗಾಗಿ ಬಿಜೆಪಿಗೆ ಬಂದಿದ್ದಾರೆ. ರಾಜಕೀಯದಲ್ಲಿ ಈ ರೀತಿಯ ನಿರ್ಧಾರ ಮಾಡುವುದು ಸಾಹಸವೇ ಸರಿ. ಇದರ ಒಟ್ಟು ಲಾಭ ಕ್ಷೇತ್ರದ ಜನರಿಗಾಗಿ ಉಳಿತು ಮಾಡುವುದಾಗಿದೆ.

ಸಂಸದ ಸುರೇಶ್‌: ಸಚಿವ ಮುನಿರತ್ನ ಅವರು ನಮ್ಮ ಸರ್ಕಾರದಲ್ಲಿ .550 ಕೋಟಿ ವೆಚ್ಚದ ಗೊರಗುಂಟೆಪಾಳ್ಯ ಜಂಕ್ಷನ್‌ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಲ್ಲ ಎಂಬ ಕಾರಣಕ್ಕೆ ಬಿಜೆಪಿಗೆ ಬಂದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬಂದಿತ್ತು. ಈಗ ಮುಖ್ಯಮಂತ್ರಿ ಅವರಿಗೆ ಒತ್ತಡ ಹಾಕಿ ಈ ಯೋಜನೆ ಮಾಡಿಸಬೇಕು. ಮುಂದಿನ ಚುನಾವಣೆಗೂ ಮುನ್ನ ಯೋಜನೆ ಪೂರ್ಣಗೊಳಿಸಬೇಕು.

ಮುಖ್ಯಮಂತ್ರಿ ಬೊಮ್ಮಾಯಿ: ಮುನಿರತ್ನ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರು ಗೊರಗುಂಟೆಪಾಳ್ಯದ ಜಂಕ್ಷನ್‌ ಅಭಿವೃದ್ಧಿಗೆ ಬಗ್ಗೆ ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲೇ ಈ ಯೋಜನೆಗೆ ಮುಂಜೂರಾತಿ ನೀಡಲಾಗುವುದು. ಮುನಿರತ್ನ ಅವರು ಯೋಜನಾ ಬದ್ಧ ಅಭಿವೃದ್ಧಿಯ ಮೂಲಕ ಕ್ಷೇತ್ರದಲ್ಲಿ ಮಾದರಿ ನಾಯಕರಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಟ್ಟಾಗಿರಬೇಕು. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ಬೇಧಭಾವ ಮಾಡುವುದಿಲ್ಲ.

ಗೋಡಾ ಹೈಮೈದಾನ ಹೈ!

ಗ್ರೇಡ್‌ ಸಪರೇಟರ್‌ ಕಾಮಗಾರಿಗೆ ಶಂಕುಸ್ಥಾಪನೆ ಬಳಿಕ ತಮ್ಮ ಭಾಷಣದಲ್ಲಿ ಮತ್ತೆ ಸಂಸದ ಸುರೇಶ್‌ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಅಭಿವೃದ್ಧಿ ಕೆಲಸ ಮಾಡುವಾಗ ನಮ್ಮ ಗ್ರೇಡ್‌ ಪಕ್ಕಕ್ಕೆ ಇರಿಸಿ ಒಂದಾಗಬೇಕು. ಸರ್ಕಾರದ ಅವಧಿ 60 ತಿಂಗಳು ಇದ್ದರೆ 59 ತಿಂಗಳು ಅಭಿವೃದ್ಧಿ ಕೆಲಸ ಮಾಡೋಣ. ಉಳಿದ ಒಂದು ತಿಂಗಳು ರಾಜಕೀಯ ಮಾಡೋಣ. ಗೋಡಾ ಹೈ, ಮೈದಾನ ಹೈ ಎನ್ನುವಂತೆ ನಮ್ಮ ಶಕ್ತಾನುಸಾರ ರಾಜಕೀಯ ಮಾಡೋಣ. ಎರಡು ರೀತಿ ರಾಜಕೀಯ ಇದೆ, ಒಂದು ಪೀಪಲ್‌ ಪಾಲಿಟಿಕ್ಸ್‌. ಮತ್ತೊಂದು ಪವರ್‌ ಪಾಲಿಟಿಕ್ಸ್‌. ಪೀಪಲ್ಸ್‌ ಪಾಲಿಟಿಕ್ಸ್‌ ಮೂಲಕ ಪವರ್‌ ಪಾಲಿಟಿಕ್ಸ್‌ ಮಾಡಬೇಕು. ಅಂದರೆ, ಪೀಪಲ್‌ ಪಾಲಿಟಿಕ್ಸ್‌ಗೆ ಪವರ್‌ ಪಾಲಿಟಿಕ್ಸ್‌ ಪೂರಕವಾಗಿರಬೇಕು ಎಂದು ಬೊಮ್ಮಾಯಿ ಹೇಳಿದರು.

ಇದಕ್ಕೆ ತಮ್ಮ ಭಾಷಣದ ವೇಳೆ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ.ಸುರೇಶ್‌ ಅವರು, ಅಭಿವೃದ್ಧಿ ರಾಜಕಾರಣಕ್ಕೆ ನಮ್ಮ ತಕರಾರಿಲ್ಲ. ದುರುದ್ದೇಶ ರಾಜಕೀಯ ಮಾಡಿದರೆ ನಾವು ಕೈಜೋಡಿಸಲ್ಲ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *