ಮುಂದಿನ ಎಲೆಕ್ಷನ್ ಗೆ ಯುವ ದಳಪತಿಗಳಾದ ನಿಖಿಲ್-ಪ್ರಜ್ವಲ್ ಜಂಟಿ ನಾಯಕತ್ವ… ಮಾಜಿ ಸಿಎಂ HDK ಘೋಷಣೆ…
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಈಗಿನಿಂದಲೇ ಸಿದ್ಧತೆಯನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಬಿಡದಿ ಬಳಿ ಇರುವ ಹೆಚ್. ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ನಾಲ್ಕು ದಿನದಿಂದ ವಿಶೇಷ ಕಾರ್ಯಾಗಾರ ನಡೆಸಲಾಗುತ್ತಿದೆ. ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಯುವ ಸಾರಥ್ಯ ಇರಲಿದ್ದು, ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ನೇತೃತ್ವದಲ್ಲೇ ಜೆಡಿಎಸ್ ಚುನಾವಣೆ ಎದುರಿಸಲಿದೆ ಎಂದು ಘೋಷಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಈಗಿನಿಂದಲೇ ಜೆಡಿಎಸ್ ರಣತಂತ್ರ ರೂಪಿಸುತ್ತಿದ್ದು, ಅದಕ್ಕಾಗಿ ಜೆಡಿಎಸ್ ಮಿಷನ್-123 ಎಂಬ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಈ ಕಾರ್ಯಾಗಾರದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದ. ಟಿಕೆಟ್ ಕೊಡುವುದರಲ್ಲೂ ಯುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆ ಎದುರಿಸಲಾಗುವುದು. ಯುವ ದಳಪತಿಗಳೇ ಜೆಡಿಎಸ್ ನ ಮಿಷನ್-123 ರಣತಂತ್ರವನ್ನು ಹೆಣೆಯಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಾಗಾರಕ್ಕೆ 300 ಜನರಿಗೆ ಆಹ್ವಾನ ನೀಡಲಾಗಿತ್ತು, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬಂದಿದ್ದಾರೆ. ಸಂಘಟನೆಗೆ ನಮ್ಮದೂ ಕೊಡುಗೆ ಇರಲಿ ಎಂಬ ಉದ್ದೇಶದಿಂದ ಯುವ ಕಾರ್ಯಕರ್ತರು ಬಂದಿದ್ದಾರೆ. ಕೇಂದ್ರ ಸರ್ಕಾರ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಈಗ ನಿರುದ್ಯೋಗ ಸಮಸ್ಯೆ ಸೃಷ್ಟಿಸಿದ್ದಾರೆ. ಮೊದಲು ಈ ನಾಡಿನ ಪ್ರತಿ ಕುಟುಂಬದ ಯುವಕ, ಯುವತಿಯರಿಗೆ ಉದ್ಯೋಗ ಸಿಗಬೇಕು, ಅವರ ಭವಿಷ್ಯ ಮುಖ್ಯ ಎಂದು ಕುಮಾರಸ್ವಾಮಿ ತಿಳಿಸಿದ್ಧಾರೆ.