ಬೆಂಗಳೂರಿನಲ್ಲಿ ಗುಡುಗು ಸಹಿತ ವರುಣನ ಅಬ್ಬರ; ರಾಜ್ಯದ ಹಲವೆಡೆ ಯೆಲ್ಲೋ, ಆರೆಂಜ್‌ ಅಲರ್ಟ್‌ ಘೋಷಣೆ!

ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ; ಮೋಡ ಕವಿದ ವಾತಾವರಣ
  • ಶಾಹೀನ್‌ ಚಂಡಮಾರುತದ ಪರಿಣಾಮ ರಾಜ್ಯಾದ್ಯಂತ ಅ. 7ರವರೆಗೆ ಹೆಚ್ಚು ಮಳೆ
  • ಕರ್ನಾಟಕದ ಹಲವು ಭಾಗಗಳಿಗೆ ಯೆಲ್ಲೋ ಅಲರ್ಟ್‌, ಆರೆಂಜ್‌ ಅಲರ್ಟ್‌ ಘೋಷಣೆ

ಬೆಂಗಳೂರು: ಶಾಹೀನ್‌ ಚಂಡಮಾರುತದ ಪರಿಣಾಮ ರಾಜ್ಯಾದ್ಯಂತ ಅ. 7ರವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ನೀಡಿದೆ.

ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನ ಸುತ್ತಮುತ್ತ ಇಂದು ಮೋಡ ಕವಿದ ವಾತಾವರಣವಿರಲಿದ್ದು, ಗರಿಷ್ಠ 30 ಡಿಗ್ರಿ ಸೆಲ್ಷಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಷಿಯಸ್ ದಾಖಲಾಗುವ ನಿರೀಕ್ಷೆಯಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಅ.6ರಂದು ಆರೆಂಜ್‌ ಅಲರ್ಟ್‌ ನೀಡಲಾಗಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಬಳ್ಳಾರಿ ಮತ್ತು ಚಿತ್ರದುರ್ಗ ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಬಹುತೇಕ ಕಡೆ ಇಂದಿನಿಂದ ಅ. 7ರವರೆಗೆ ಮಳೆ ಜಾಸ್ತಿಯಾಗಲಿದೆ. ಬೆಂಗಳೂರಿನಲ್ಲಿ 2 ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ. ಮಳೆಯಿಂದ ಸಿಲಿಕಾನ್ ಸಿಟಿಯ ರಾಜಕಾಲುವೆ ಉಕ್ಕಿ ಹರಿದಿದೆ. ಬೆಂಗಳೂರಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹೆಚ್‌ಎಎಲ್ ಬಳಿಯ ರಮೇಶ್ ನಗರದಲ್ಲಿ ಗೋಡೆ ಕುಸಿತವಾಗಿದೆ. ಹೆಚ್‌ಎಎಲ್‌ಗೆ ಸೇರಿದ 12 ಅಡಿ ಎತ್ತರದ ಗೋಡೆ ಕುಸಿತವಾಗಿದೆ.


ಮಳೆಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ; ಕಂದಾಯ ವಿಭಾಗದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ನಷ್ಟ ಉಂಟಾಗಿದೆ. ಮಳೆಯಿಂದ ನಷ್ಟ ಅನುಭವಿಸುವ ಕುಟುಂಬಗಳ ಸಮೀಕ್ಷೆ ನಡೆಸಿ, ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಮಳೆ ಹಾನಿ ಕುರಿತು ಮಂಗಳವಾರ ಅಧಿಕಾರಿಗಳೊಂದಿಗೆ ವರ್ಚುವಲ್‌ ಮೂಲಕ ಸಭೆ ನಡೆಸಿದ ಅವರು, ‘‘ನಗರದಲ್ಲಿ ಸುರಿದ ಮಳೆಯಿಂದ ಹಲವು ಸಮಸ್ಯೆಗಳಾಗಿವೆ. ದಕ್ಷಿಣ ವಲಯದಲ್ಲಿ ಮರ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ. ರಾಜರಾಜೇಶ್ವರಿನಗರ ವಲಯದಲ್ಲಿ ಜಾನುವಾರುಗಳು ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿವೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಹಾಗಾಗಿ, ಎಲ್ಲೆಲ್ಲಿ ಸಮಸ್ಯೆಗಳಾಗಿವೆ, ಎಷ್ಟು ಮನೆಗಳಿಗೆ ನೀರು ನುಗ್ಗಿತ್ತು ಎಂಬುದರ ಕುರಿತು ಕಂದಾಯ ಅಧಿಕಾರಿಗಳು ತ್ವರಿತವಾಗಿ ಸಮೀಕ್ಷೆ ನಡೆಸಿ, ನಷ್ಟಕ್ಕೆ ತಕ್ಕಂತೆ ಪರಿಹಾರ ನೀಡಲು ಕ್ರಮ ವಹಿಸಬೇಕು,’’ ಎಂದು ತಾಕೀತು ಮಾಡಿದ್ದಾರೆ

‘‘ನಗರದ ಹೊರವಲಯಗಳಲ್ಲಿ ತಡೆಗೋಡೆ ನಿರ್ಮಿಸದ ಕಡೆ ರಾಜಕಾಲುವೆಗಳು ಉಕ್ಕಿ ಹರಿದು ಮನೆಗಳಿಗೆ ನೀರು ನುಗುತ್ತಿದೆ. ಇಂಥ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ತಡೆಗೋಡೆ ನಿರ್ಮಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕು. ಮಳೆಗಾಲದಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ, ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಹಾಗೆಯೇ, ತಗ್ಗು ಪ್ರದೇಶಗಳಲ್ಲಿ ರಾಜಕಾಲುವೆಯಿಂದ ನೀರು ನುಗ್ಗುವ ಸ್ಥಳಗಳನ್ನು ಗುರುತಿಸಿ, ನೀರು ಹೋಗದಂತೆ ತಡೆಯಬೇಕು. ಮನೆ, ರಸ್ತೆ, ಕೆಳಸೇತುವೆಗಳಲ್ಲಿ ನಿಲ್ಲುವ ನೀರನ್ನು ಪಂಪ್‌ಗಳ ಮೂಲಕ ತೆರವು ಮಾಡಬೇಕು,’’ ಎಂದು ನಿರ್ದೇಶನ ನೀಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *