ಬಿಜೆಪಿ ಸರ್ಕಾರ ರಸ್ತೆಯ ಗುಂಡಿಗಳಿಗೆ ಜನರನ್ನು ಬಲಿ ಹಾಕುತ್ತಿದೆ: ಕಾಂಗ್ರೆಸ್ ಕಿಡಿ
ಬೆಂಗಳೂರು: ಭ್ರಷ್ಟಾಚಾರದ ಗುಂಡಿಯೊಳಗೆ ಬಿದ್ದಿರುವ ಬಿಜೆಪಿ ಸರ್ಕಾರ (BJP government) ರಸ್ತೆಯ ಗುಂಡಿಗಳಿಗೆ ಜನರನ್ನು ಬಲಿ ಹಾಕುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ (Congress) ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿರುವ ಹೊಂಡಗಳು ಜನರ ಪಾಲಿಗೆ ಮೃತ್ಯು ಗುಂಡಿಗಳಾಗಿ ಪರಿಣಮಿಸಿವೆ.
ವಾಹನ ಸವಾರರು ರಸ್ತೆ ಗುಂಡಿ(Potholes Problems)ಗಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಬೆಂಗಳೂರಿನಲ್ಲಿ ಕಳೆದ 20 ದಿನಗಳಲ್ಲಿ ಮೂವರು ದ್ವಿಚಕ್ರ ವಾಹನ ಸವಾರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
‘ಬೆಂಗಳೂರು ಮಾತ್ರವಲ್ಲದೆ, ರಾಜ್ಯದಾದ್ಯಂತ ಪ್ರತಿದಿನವೂ ರಸ್ತೆ ಗುಂಡಿಗಳಿಂದಾಗಿ ಸಾವು ಸಂಭವಿಸುತ್ತಿದೆ. ಕೊರೊನಾ(CoronaVirus)ದಿಂದ ಕೊಂದಿದ್ದಾಯ್ತು, ಇನ್ನೂ ಅದೆಷ್ಟು ಬಗೆಯಲ್ಲಿ ಜನರನ್ನು ಕೊಲ್ಲಲು ಯೋಚಿಸಿದೆ ಈ ಬಿಜೆಪಿ ಸರ್ಕಾರ(BJP Govt.)’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
‘ಬಿಜೆಪಿ ಆಡಳಿತ(BJP Govt.)ದಲ್ಲಿ ಯಾವ ಇಲಾಖೆಯೂ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಅಬಕಾರಿ ಇಲಾಖೆಯ ಜ್ಯೇಷ್ಠತಾ ಪಟ್ಟಿಯ ಗೋಲ್ಮಾಲ್ ಸಚಿವರ ಗಮನಕ್ಕೆ ಬಂದಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ #VijyendraServiceTax ಇನ್ನೂ ಜಾರಿಯಲ್ಲಿದೆಯೇ? ‘ಸೂಪರ್ ಸಿಎಂ’ ಹಸ್ತಕ್ಷೇಪ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸರ್ಕಾರದಲ್ಲೂ ಮುಂದುವರೆದಿದೆಯೇ ಬಿಜೆಪಿ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.