Karnataka Rains: ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ, ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ರಾಜ್ಯಾದ್ಯಂತ ಅ.12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ವರುಣನ (Rainfall)ಆರ್ಭಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಬಂಗಾಳಕೊಲ್ಲಿಯಲ್ಲಿ (Bay Of Bengal)ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇದು ಮುಂದಿನ ಕೆಲವು ದಿನಗಳವರೆಗೂ ಮುಂದುವರೆಯಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಈಗಾಗಲೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಈ ಮಧ್ಯೆ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ(Hurricane) ಸೃಷ್ಟಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ಪರಿಣಾಮ ಕರ್ನಾಟಕ ಸೇರಿ ಕೆಲವು ರಾಜ್ಯಗಳಲ್ಲಿ ಅ.12ರವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ಉತ್ತರ ಅಂಡಮಾನ್ ಸಮುದ್ರದಲ್ಲಿ ನಾಳೆ (ಅ.10) ವೇಳೆಗೆ ವಾಯುಭಾರ ಕುಸಿತ ಉಂಟಾಗಲಿದ್ದು, ದೇಶದ ಕೆಲವು ಭಾಗಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಲಿದೆ ಅಂತಾ ತಿಳಿದುಬಂದಿದೆ.
ಚಂಡಮಾರುತ(Hurricane)ದ ಪರಿಣಾಮ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಕೆಲ ದಿನಗಳಲ್ಲಿ ಪಶ್ಚಿಮ ಪ್ರದೇಶದಿಂದ ವಾಯವ್ಯ ದಿಕ್ಕಿಗೆ ಅಂದರೆ ಒಡಿಶಾ, ಆಂಧ್ರಪ್ರದೇಶ ಉತ್ತರ ಕರಾವಳಿ ಕಡೆಗೆ ಚಂಡಮಾರುತ ಚಲನೆಯಾಗಬಹುದು ಎಂದು ಹೇಳಲಾಗುತ್ತಿದೆ. ಇದರ ಪ್ರಭಾವದಿಂದ ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಕೊಂಕಣ, ಮಹಾರಾಷ್ಟ್ರ, ಕರ್ನಾಟಕ(Karnataka)ದ ಉತ್ತರ ಒಳನಾಡು, ಆಂಧ್ರ ಪ್ರದೇಶ, ಕೇರಳದಲ್ಲಿ ವರುಣ ಆರ್ಭಟಿಸಲಿದ್ದಾನೆ.
ಅಕ್ಟೋಬರ್ 12ರವರೆಗೂ ಕರ್ನಾಟಕದ ಉತ್ತರ ಒಳನಾಡು ಸೇರಿ ಪುದುಚೇರಿ, ಆಂಧ್ರ ಕರಾವಳಿ, ತೆಲಂಗಾಣ, ತಮಿಳುನಾಡು, ಗೋವಾ, ಕಾರೈಕಲ್, ಪಶ್ಚಿಮ ಬಂಗಾಳ, ಒಡಿಶಾ, ಸಿಕ್ಕಿಂ, ಕೊಂಕಣದಲ್ಲಿ ಗುಡುಗುಮಿಂಚು ಸಹಿತ ಭಾರೀ ಮಳೆ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೈಸೂರು, ಬೆಂಗಳೂರು, ಯಾದಗಿರಿ , ಗುಲ್ಬರ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಸಹ ವರುಣನ ಆರ್ಭಟ ಜೋರಾಗಿರಲಿದ್ದು, ಇಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಕೆಲವು ರಾಜ್ಯಗಳಲ್ಲಿ ಮಳೆ ಆರ್ಭಟ ಶುರುವಾಗಲಿದೆ, ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಮಳೆ ಇನ್ನಿಲ್ಲದ ಅವಾಂತರ ಸೃಷ್ಟಿಸಿದ್ದು, ಪ್ರವಾಹದಂತಹ ಪರಿಸ್ಥಿತಿಯಿಂದ ಜನರು ಸಮಸ್ಯೆಗೆ ಸಿಲುಕಿದ್ದಾರೆ.