ಬಿಎಂಟಿಸಿ ತೆಕ್ಕೆಗೆ ಮತ್ತೆ 300 ಎಲೆಕ್ಟ್ರಿಕ್‌ ಬಸ್‌; ಅಶೋಕ್‌ ಲೇಲ್ಯಾಂಡ್‌ ಸಂಸ್ಥೆಗೆ ಗುತ್ತಿಗೆ!

ಹೈಲೈಟ್ಸ್‌:

  • ಗುತ್ತಿಗೆ ಆಧಾರದಲ್ಲಿ ಬಸ್‌ ಕಾರ್ಯಾಚರಣೆ ನಡೆಸಲಿದೆ ಅಶೋಕ್‌ ಲೇಲ್ಯಾಂಡ್‌ ಕಂಪನಿ
  • ಬಿಎಂಟಿಸಿಯಿಂದ ಪ್ರತಿ ಕಿ.ಮೀ. ಸಂಚಾರಕ್ಕೆ 48.90 ರೂ. ಪಾವತಿ
  • 10 ವರ್ಷ ಅವಧಿಯ ನಿರ್ವಹಣೆ ಹೊಣೆ
  • ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್‌ ಬಸ್‌ ಪಡೆದಿದೆ ಬಿಎಂಟಿಸಿ

ಬೆಂಗಳೂರು: ಕೇಂದ್ರದ ಫೇಮ್‌-2 ಯೋಜನೆಯಡಿ ಸಿಲಿಕಾನ್‌ ಸಿಟಿಯಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುವ ಪ್ರಕ್ರಿಯೆಯು ಕೊನೆಗೂ ಸಾಕಾರಗೊಂಡಿದೆ. 300 ಇ-ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಓಡಿಸಲು ಟೆಂಡರ್‌ ಪಡೆದಿರುವ ಅಶೋಕ್‌ ಲೇಲ್ಯಾಂಡ್‌ ಕಂಪೆನಿಗೆ ಕಾರ್ಯಾದೇಶ ನೀಡಲು ಬಿಎಂಟಿಸಿ ಆಡಳಿತ ಮಂಡಳಿಯು ಅಸ್ತು ಎಂದಿದೆ.

ಬಿಎಂಟಿಸಿಯು ಸ್ಮಾರ್ಟ್‌ ಸಿಟಿ ಯೋಜನೆಯಡಿ 90 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆಗೆ ಪಡೆಯುವ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸಿದೆ. ಈಗಾಗಲೇ ಒಂದು ಬಸ್‌ ನಗರಕ್ಕೆ ಬಂದಿಳಿದಿದೆ. ಉಳಿದ ಬಸ್‌ಗಳು ಡಿಸೆಂಬರ್‌ ಅಂತ್ಯದ ವೇಳೆಗೆ ಪೂರೈಕೆಯಾಗಲಿವೆ. ಇದರೊಂದಿಗೆ ಫೇಮ್‌-2 ಯೋಜನೆಯ ಬಸ್‌ಗಳೂ ಸೇರಿದರೆ, ಒಟ್ಟು 390 ಇ-ಬಸ್‌ಗಳು ಬಿಎಂಟಿಸಿ ತೆಕ್ಕೆ ಸೇರಲಿವೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 4ನೇ ಬಾರಿ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿಅಶೋಕ್‌ ಲೇಲ್ಯಾಂಡ್‌ ಕಂಪೆನಿಯು ಕಡಿಮೆ ದರ ನಮೂದಿಸಿ, ಗುತ್ತಿಗೆ ಆಧಾರದ ಮೇಲೆ 12 ಮೀಟರ್‌ ಉದ್ದದ 300 ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸುವ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿಶುಕ್ರವಾರ ನಡೆದ ಮಂಡಳಿ ಸಭೆಯಲ್ಲಿ ಇ-ಬಸ್‌ಗಳ ಸರಬರಾಜಿಗೆ ಅಶೋಕ್‌ ಲೇಲ್ಯಾಂಡ್‌ ಕಂಪೆನಿಗೆ ಕಾರ್ಯಾದೇಶ ನೀಡಲು ನಿರ್ಣಯಿಸಲಾಗಿದೆ.

ಸಾರ್ವಜನಿಕ ಸಾರಿಗೆಗೆ ಬಳಕೆಯಾಗುವ ಬಸ್‌ಗಳನ್ನು ಎಲೆಕ್ಟ್ರಿಕ್‌ ವ್ಯವಸ್ಥೆಗೆ ಬದಲಿಸುವ ನಿಟ್ಟಿನಲ್ಲಿಎರಡನೇ ಹಂತದ ‘ಫಾಸ್ಟರ್‌ ಅಡಾಪ್ಷನ್‌ ಆ್ಯಂಡ್‌ ಮ್ಯಾನುಫ್ಯಾಕ್ಚರಿಂಗ್‌ ಆಫ್‌ ಹೈಬ್ರಿಡ್‌ ಆ್ಯಂಡ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಇನ್‌ ಇಂಡಿಯಾ’ (ಫೇಮ್‌ ಇಂಡಿಯಾ) ಯೋಜನೆಯಡಿ ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವಾಲಯವು ರಾಜ್ಯದಲ್ಲಿ400 ಇ-ಬಸ್‌ಗಳನ್ನು ಕಾರ್ಯಾಚರಣೆಗೆ ಸಬ್ಸಿಡಿ ನೀಡುತ್ತಿದೆ. ಇದರಲ್ಲಿ ಬೆಂಗಳೂರಿಗೆ 300, ವಾಯುವ್ಯ ಮತ್ತು ಕೆಎಸ್‌ಆರ್‌ಟಿಸಿಗೆ ತಲಾ 50 ಬಸ್‌ಗಳಿಗೆ ಆರ್ಥಿಕ ನೆರವು ನೀಡುತ್ತಿದೆ.

ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆದು ಕಾರ್ಯಾಚರಣೆಗೊಳಿಸುವ ಷರತ್ತಿನ ಮೇಲೆ ಕೇಂದ್ರವು ಸಬ್ಸಿಡಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿಯು ಎಲೆಕ್ಟ್ರಿಕ್‌ ಬಸ್‌ಗಳನ್ನು ಸಿಲಿಕಾನ್‌ ಸಿಟಿಯ ರಸ್ತೆಗಿಳಿಸಲು ಮೂರು ಸಲ ಟೆಂಡರ್‌ ಕರೆಯಿತು. ಆದರೆ, ಬಿಡ್‌ದಾರರು ಅಧಿಕ ದರ ನಮೂದಿಸಿದ್ದ ಕಾರಣ, ಇ-ಬಸ್‌ಗಳನ್ನು ಗುತ್ತಿಗೆಗೆ ಪಡೆಯುವುದಕ್ಕೆ ಮುಹೂರ್ತವೇ ಕೂಡಿಬಂದಿರಲಿಲ್ಲ.

ಮೊದಲ ಬಾರಿ ಟೆಂಡರ್‌ ಆಹ್ವಾನಿಸಿದಾಗ ಕೆಲ ಕಂಪೆನಿಗಳು ಪ್ರತಿ ಕಿ.ಮೀ ಗೆ 105 ರೂ. ದರ ನಮೂದಿಸಿ ಬಿಡ್‌ ಸಲ್ಲಿಸಿದ್ದವು. ಈ ದರ ದುಬಾರಿಯಾದ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆ ರದ್ದುಗೊಳಿಸಿ, ಎರಡನೇ ಸಲ ಟೆಂಡರ್‌ ಕರೆಯಲಾಯಿತು. ಆಗ ಒಲೆಕ್ಟ್ರಾ ಕಂಪೆನಿಯು ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ಗಳಿಗೆ ಪ್ರತಿ ಕಿ.ಮೀ ಗೆ 89.64 ರೂ. ನಮೂದಿಸಿತ್ತು. ಇದು ಕೂಡ ದುಬಾರಿ ಎನಿಸಿದ್ದರಿಂದ ರದ್ದುಪಡಿಸಲಾಗಿತ್ತು.

ಬಿಎಂಟಿಸಿಯು ಕೆಲ ವರ್ಷಗಳ ಹಿಂದೆಯೇ 150 ಇ-ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲು ತೀರ್ಮಾನಿಸಿತ್ತು. ಕೇಂದ್ರ ಸರಕಾರವು ಒಂದನೇ ಹಂತದಲ್ಲಿ80 ಬಸ್‌ಗಳಿಗೆ 18.68 ಕೋಟಿ ರೂ. ಸಬ್ಸಿಡಿಯನ್ನೂ ಬಿಡುಗಡೆ ಮಾಡಿತ್ತು. ಈ ಸಬ್ಸಿಡಿಯನ್ನು ಕಾಲಮಿತಿಯೊಳಗೆ ಬಳಸಲು ಷರತ್ತು ವಿಧಿಸಿತ್ತು. ಹೀಗಾಗಿ, ಟೆಂಡರ್‌ ಮೂಲಕ ಹೈದರಾಬಾದ್‌ ಮೂಲದ ಗೋಲ್ಡ್‌ ಸ್ಟೋನ್‌ ಕಂಪೆನಿಗೆ ಬಸ್‌ಗಳನ್ನು ಪೂರೈಸುವ ಗುತ್ತಿಗೆ ನೀಡಿತ್ತು. ಈ ಕಂಪೆನಿಗೆ ಕಿ.ಮೀ ಗೆ 37.50 ರೂ. ನೀಡಲು ನಿರ್ಧರಿಸಲಾಗಿತ್ತು. ಈ ಮಧ್ಯೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಿತು. ಆಗ ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಣ್ಣ ಅವರು ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್‌ ಬಸ್‌ ಪಡೆಯಲು ಒಲವು ತೋರದ ಕಾರಣ, ಟೆಂಡರ್‌ ಪ್ರಕ್ರಿಯೆ ರದ್ದುಗೊಂಡಿತ್ತು.

6 ತಿಂಗಳಲ್ಲಿ ಶೇ.50 ಬಸ್‌ ಪೂರೈಕೆ
ಅಶೋಕ್‌ ಲೇಲ್ಯಾಂಡ್‌ ಕಂಪೆನಿಗೆ ಬಿಎಂಟಿಸಿಯು ಪ್ರತಿ ಕಿ.ಮೀ ಗೆ 48.90 ರೂ. ಪಾವತಿಸಲಿದೆ. ಗುತ್ತಿಗೆ ಕಂಪೆನಿಯೇ ಚಾಲಕರನ್ನು ನಿಯೋಜಿಸಿ ವೇತನ ನೀಡಲಿದೆ. ವಾಹನಗಳ ನಿರ್ವಹಣೆ ಜವಾಬ್ದಾರಿಯೂ ಕಂಪೆನಿಯದ್ದೇ ಆಗಿದೆ. ಇದಲ್ಲದೇ ವಿದ್ಯುತ್‌ ಶುಲ್ಕವನ್ನು ಪಾವತಿಸಲಿದ್ದು, ಬಾಡಿಗೆ ರೂಪದಲ್ಲಿ ವರ್ಷಕ್ಕೆ ಪ್ರತಿ ಬಸ್‌ಗೆ 1000 ರೂ.ಗಳನ್ನು ಸಾರಿಗೆ ಸಂಸ್ಥೆಗೆ ನೀಡಲಿದೆ.

ಸಾರಿಗೆ ಸಂಸ್ಥೆಯು ನಿರ್ವಾಹಕರನ್ನಷ್ಟೇ ನೇಮಕ ಮಾಡಲಿದೆ. ನಿತ್ಯ ಪ್ರತಿ ಬಸ್‌ನ 225 ಕಿ.ಮೀ ಸಂಚಾರಕ್ಕೆ ಲೆಕ್ಕ ಹಾಕಿ ಗುತ್ತಿಗೆ ಕಂಪೆನಿಗೆ ದರ ಪಾವತಿ ಮಾಡಲಿದೆ. ನಿಗದಿತ 225 ಕಿ.ಮೀ ಗಿಂತ ಕಡಿಮೆ ದೂರ ಬಸ್‌ಗಳು ಸಂಚರಿಸಿದರೆ, ಸಾರಿಗೆ ಸಂಸ್ಥೆಗೆ ನಷ್ಟವಾಗಲಿದೆ. ಈ ಬಸ್‌ಗಳನ್ನು ಒಮ್ಮೆ ಚಾರ್ಜ್ ಮಾಡಿದರೆ 190 ಕಿ.ಮೀ ದೂರ ಕ್ರಮಿಸಲಿವೆ. ಅಶೋಕ್‌ ಲೇಲ್ಯಾಂಡ್‌ ಕಂಪೆನಿಯು ಆರು ತಿಂಗಳಲ್ಲಿ ಶೇ 50 ಮತ್ತು 9 ತಿಂಗಳಲ್ಲಿಉಳಿದ ಶೇ 50ರಷ್ಟು ಬಸ್‌ಗಳನ್ನು ಪೂರೈಸಲಿದೆ. 10 ವರ್ಷಗಳ ಅವಧಿಗೆ ಬಸ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ.

ಪ್ರತಿ ಬಸ್‌ಗೆ 88.33 ಲಕ್ಷ ಸಬ್ಸಿಡಿ
ಕೇಂದ್ರ ಸರಕಾರವು ಫೇಮ್‌-2 ಯೋಜನೆಯಡಿ ಪ್ರತಿ ಎಲೆಕ್ಟ್ರಿಕ್‌ ಬಸ್‌ಗೆ 55 ಲಕ್ಷ ರೂ. ಮತ್ತು ರಾಜ್ಯ ಸರಕಾರವು 33.33 ಲಕ್ಷ ರೂ. ಸಬ್ಸಿಡಿ ನೀಡಲಿದೆ. 300 ಎಲೆಕ್ಟ್ರಿಕ್‌ ಬಸ್‌ಗಳಿಗೆ ಒಟ್ಟು 264.99 ಕೋಟಿ ರೂ.ಗಳನ್ನು ಗುತ್ತಿಗೆ ಕಂಪೆನಿಯಾದ ಅಶೋಕ ಲೇಲ್ಯಾಂಡ್‌ಗೆ ನೀಡಲಾಗುತ್ತದೆ. ಗುತ್ತಿಗೆ ಕಂಪೆನಿಯೇ ತನ್ನ ಸ್ವಂತ ವೆಚ್ಚದಲ್ಲಿ ಚಾರ್ಜಿಂಗ್‌ ಕೇಂದ್ರ ಸ್ಥಾಪಿಸಲಿದೆ.

ಸ್ಮಾರ್ಟ್‌ ಸಿಟಿಯಡಿ 51.67 ರೂ. ಪಾವತಿ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಲಭಿಸಿರುವ 50 ಕೋಟಿ ರೂ.ಗಳಲ್ಲಿ90 ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗುತ್ತಿದೆ. ಎನ್‌ಟಿಪಿಸಿ ಕಂಪೆನಿಗೆ ಸಾರಿಗೆ ಸಂಸ್ಥೆಯು ಪ್ರತಿ ಕಿ.ಮೀ ಗೆ 51.67 ರೂ. ಪಾವತಿ ಮಾಡಲಿದೆ. ಇದಕ್ಕೆ ಹೋಲಿಸಿದರೆ, ಅಶೋಕ್‌ ಲೇಲ್ಯಾಂಡ್‌ ಕಂಪೆನಿಯು ಪ್ರತಿ ಕಿ.ಮೀ ಗೆ 2.77 ರೂ. ಕಡಿಮೆ ದರದಲ್ಲಿ 300 ಇ-ಬಸ್‌ಗಳನ್ನು ಓಡಿಸಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *