ಕಲಬುರಗಿ: ಬಿಜೆಪಿ ಮುಖಂಡರನ್ನು ಅವಮಾನಿಸಿದ ಸಂಸದ ಜಾದವ್

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಬಿಜೆಪಿ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರಿಗೆ ರವಿವಾರ ಮಧ್ಯಾಹ್ನ ೧೨ಕ್ಕೆ ಸಭೆ ಕರೆದ ಸಂಸದ ಡಾ.ಉಮೇಶ ಜಾದವ ಪಟ್ಟಣಕ್ಕೆ ಬಂದರೂ ಸಭೆ ನಡೆಸದೆ ಏಕಾಏಕಿ ಸಭೆ ರದ್ದು ಮಾಡಿ ವಾಪಸ್ ಹೋಗಿದ್ದು ಬಿಜೆಪಿ ನಾಯಕರನ್ನು ಅವಮಾನಿಸಲಾಗಿದೆ ಎಂದು ಹಲವು ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.

ಪಟ್ಟಣದ ನೂರಂದೇಶ್ವರ ಕಾಲೇಜು ಆವರಣದಲ್ಲಿ ಬಿಜೆಪಿ ಮುಖಂಡರ ಸಭೆ ಕರೆದು ಏಕಾಏಕಿ ರದ್ದುಪಡಿಸಿದ್ದಕ್ಕೆ ತಾಲ್ಲೂಕ ಬಿಜೆಪಿ ಮಂಡಲ ಅಧ್ಯಕ್ಷ ಭೀಮರಾವ ಗುಜಗುಂಡ, ಮುಖಂಡರಾದ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಹಳ್ಳೆಪ್ಪಾಚಾರ್ಯ ಜೋಶಿ, ಸೋಮಶೇಖರ ಹೂಗಾರ, ಸುರೇಶ ಹಳ್ಳಿ, ಜಿಪಂ ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ ಹಾಗೂ ಎಲ್ಲ ಮೋರ್ಚಾಗಳ ಅಧ್ಯಕ್ಷರು ಸೇರಿದಂತೆ ಇಡೀ ತಾಲೂಕಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಸಭೆ ನಡೆಸಲು ಸೂಚಿಸಿದ ಸಂಸದ ಡಾ.ಉಮೇಶ ಜಾದವ ಅವರು ಯಾರಿಗೂ ಮಾಹಿತಿ ನೀಡದೆ ಏಕಾಏಕಿ ಸಭೆ ರದ್ದು ಮಾಡಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಯಿತು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸದರು ಪಟ್ಟಣಕ್ಕೆ ಆಗಮಿಸಿದ್ದರು. ಅಲ್ಲದೆ ಲೋಕಸಭೆ ಚುನಾವಣೆಯ ನಂತರ  ಸಂಸದ ಡಾ.ಉಮೇಶ ಜಾಧವ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಭೇಟಿ ಮಾಡಲಿದ್ದರು. ಲೋಕಸಬೆ ಚುನಾವಣೆ ಮುಗಿದು ೨ ವರ್ಷ ಗತಿಸಿದ ನಂತರ ಇದೇ ಮೊದಲ ಭಾರಿಗೆ ತಾಲ್ಲೂಕಿಗೆ ಬಣದು ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಮಾಡುತ್ತಿರುವುದರಿಂದ ಈ ಸಭೆ ಮಹತ್ವ ಪಡೆದುಕೊಂಡಿತ್ತು. ಜಿಲ್ಲೆಯಿಂದ ದೂರದರ್ಶನ ಕೇಂದ್ರ ವಾಪಸ್ ಹೋಗಿದ್ದರ ಬಗ್ಗೆ, ಪಕ್ಷದ ಸಂಘಟನೆಯ ಬಗ್ಗೆಯೂ ಮುಖಂಡರು ಮತ್ತು ಕಾರ್ಯಕರ್ತರು ಚರ್ಚೆ ನಡೆಸುತ್ತಿದ್ದರು.

ಆದರೆ ಏಕಾಏಕಿ ಸಭೆ ರದ್ದು ಮಾಡಿದ್ದರಿಂದ ದೂರದ ಊರುಗಳಿಂದ ಪಟ್ಟಣಕ್ಕೆ ಬಂದ ಮುಖಂಡರು ಹಿಡಿಶಾಪ ಹಾಕಿ ವಾಪಸ್ ಹೋದರು. ಮುಖಂಡರ ಸಭೆ ರದ್ದಾಗಿದ್ದಕ್ಕೆ ಹಲವರು ಸಿಟ್ಟಾದ ಘಟನೆ ನಡೆಯಿತು. ಜೇವರ್ಗಿ ವಿಧಾನಸಭೆಯಿಂದ ಬಿಜೆಪಿಗೆ ಸುಮಾರು ೨೪ ಸಾವಿರ ಮತಗಳು ಹೆಚ್ಚಾಗಿವೆ. ಆದರೂ ಸಂಸದ ಡಾ.ಉಮೇಶ ಜಾದವ ಅವರು ಬಿಜೆಪಿ ಮುಖಂಡರಿಗೆ ಅವಮಾನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಇನ್ನೊಂದು ಮೂಲಗಳ ಪ್ರಕಾರ ಲೋಕಸಭೆ ಚುನಾವಣೆ ಮುಗಿದ ಮೇಲೆ ಇದೇ ಮೊದಲ ಬಾರಿಗೆ ಪಟ್ಟಣದಲ್ಲಿ ಬಿಜೆಪಿ ಮುಖಂಡರ ಸಭೆ ನಡೆಸುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಸಭೆಯಲ್ಲಿಯೇ ಹಲವು ಮುಖಂಡರು ಜಾಧವ ಅವರನ್ನು ತರಾಟೆಗೆ ತೆಗೆದುಕೊಳ್ಳುವ ತವಕದಲ್ಲಿದ್ದರು. ಇದನ್ನು ತಮ್ಮ ಬೆಂಬಲಿಗರ ಮೂಲಕ ಅರಿತುಕೊಂಡ ಸಂಸದರು ಕೇವಲ ಪ್ರವಾಸಿ ಮಂದಿರದಲ್ಲಿದ್ದವರನ್ನೇ ಭೇಟಿ ಮಾಡಿ ವಾಪಸ್ ಹೋದ ಘಟನೆ ನಡೆಯಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *